ಸ್ವಾತಂತ್ರದ ಹಾದಿ - ಕನ್ನಡ ಸ್ವತಂತ್ರ ಪ್ರಕಾಶನ ಲೋಕದತ್ತ ಒಂದು ನೋಟ

Forgot password?

Delete Comment

Are you sure you want to delete this comment?

ಸ್ವಾತಂತ್ರದ ಹಾದಿ - ಕನ್ನಡ ಸ್ವತಂತ್ರ ಪ್ರಕಾಶನ ಲೋಕದತ್ತ ಒಂದು ನೋಟ

ಗುರುಪ್ರಸಾದ್ ಡಿ ಎನ್ ಅವರ ವರದಿ

ಇಂಗ್ಲಿಶಿನಲ್ಲಿ ಇಂಡಿಪೆಂಡೆಂಟ್ ಪಬ್ಲಿಶಿಂಗ್ ಅಥವಾ ಸ್ಮಾಲ್ ಪ್ರೆಸ್ ಎಂದು ಕರೆಯುವ ಪ್ರಕಾಶನ ಮಾದರಿಯನ್ನು ಕನ್ನಡದ ಯಾವ ಪ್ರಕಾಶಕರಿಗೆ ಆರೋಪಿಸಬಹುದು ಅಂತ ಯೋಚಿಸಿದರೆ,  ಒಂದೆರಡು ಪ್ರಕಾಶನಗಳನ್ನು ಬಿಟ್ಟರೆ ಬಹುತೇಕ ಎಲ್ಲಾ ಕನ್ನಡ ಪ್ರಕಾಶನಗಳು ಸ್ವಂತಂತ್ರ ಪ್ರಕಾಶನ ಸಂಸ್ಥೆಗಳೇ. ಸ್ಮಾಲ್ ಪ್ರೆಸ್ ಗಳೇ. ಅವುಗಳು ನಿರ್ವಹಿಸುವ ವಿಷಯಗಳಾಗಲೀ, ಅವುಗಳು ಹೊರತರುವ ಪುಸ್ತಕಗಳ ಸಂಖ್ಯೆ ಆಗಲೀ, ಅವುಗಳನ್ನು ಮಾರಾಟ ಮಾಡಲು ಅವರಿಗಿರುವ ಸವಾಲಿನ ದೃಷ್ಟಿಯಿಂದ ಆಗಲೀ ಕನ್ನಡ ಪ್ರಕಾಶನ ಉದ್ಯಮದ ಆಧಾರಸ್ಥಂಬ ಸ್ವತಂತ್ರ ಪ್ರಕಾಶಕರೇ!

ಸ್ವತಂತ್ರ ಪ್ರಕಾಶಕರಿಗೆ ಕೆಲವೊಂದು ವಿಶಿಷ್ಟ ಲಕ್ಷಣಗಳಿವೆ. ಅವುಗಳಲ್ಲಿ ಕೆಲವನ್ನಿಲ್ಲಿ ಪಟ್ಟಿ ಮಾಡಬಹುದಾದರೆ, ಹೊಸ ಲೇಖಕರಿಗೆ ಅವಕಾಶ ಕೊಡುವುದು, ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಮಾರಾಟ ಆಗುವುದಿಲ್ಲ ಎನ್ನುವ ಪ್ರಕಾರದ (Genre) ಪುಸ್ತಕಗಳನ್ನು ಪ್ರಕಟ ಮಾಡುವುದು (ಉದಾ: ಕವನ ಸಂಕಲನಗಳು), ನೇರವಾಗಿ ಓದುಗರ ಜೊತೆಗೆ ಸಂಪರ್ಕ ಹೊಂದಿರುವುದು, ಎಷ್ಟೋ ಸಾರಿ ಲೇಖಕನಾದವನು ತನ್ನ ಪುಸ್ತಕಗಳನ್ನು ಪ್ರಕಟಿಸಿಕೊಳ್ಳುವ ಸಲುವಾಗಿಯೇ ಪ್ರಕಾಶನ ಸಂಸ್ಥೆ ಹುಟ್ಟಿಕೊಂಡು ಅದು ವಿಶಾಲವಾಗಿ ಬೆಳೆಯುವುದು, ವ್ಯವಸ್ಥೆಯ ವಿರುದ್ಧ ಹೋರಾಡುವ ಪುಸ್ತಕ-ಸಾಹಿತ್ಯ ಪ್ರಕಟಿಸುವ ಧೈರ್ಯ ಹೊಂದುವುದು, ಹೀಗೆ ಹಲವು ಲಕ್ಷಣಗಳನ್ನು ಪಟ್ಟಿ ಮಾಡಿಕೊಂಡು ಹೋಗುವುದಕ್ಕೆ ಸಾಧ್ಯ. ಕನ್ನಡದ ಪ್ರಕಾಶನದ ಮಟ್ಟಿಗೆ ಇವೆಲ್ಲಾ ಲಕ್ಷಣಗಳನ್ನು ಹೊಂದಿರುವ ಸ್ವತಂತ್ರ ಪ್ರಕಾಶನ ಸಂಸ್ಥೆಗಳು ಕೆಲವು ಇದ್ದರೆ, ವಿನೂತನ ಪ್ರಯತ್ನಗಳಿಗೆ ಸದಾ ಒಡ್ಡಿಕೊಂಡಿರುವ ಪ್ರಕಾಶಕರಿಗಂತೂ ಕೊರತೆಯಿಲ್ಲ. ಪ್ರಾತಿನಿಧಿಕವಾಗಿ ಕನ್ನಡ ಪ್ರಕಾಶನಲೋಕದ ಪರಂಪರೆ ಮತ್ತು ಸದ್ಯದ ಪರಿಸ್ಥಿತಿಯನ್ನು ಹಿಡಿದಿಡುವ ಪ್ರಯತ್ನ ಇದು.

20ನೇ ಶತಮಾನದ ಮಧ್ಯಭಾಗದಲ್ಲಿ ಕರ್ನಾಟಕದ ಹಲವು ಭಾಗಗಳಲ್ಲಿ ಹುಟ್ಟಿಕೊಂಡ ಪ್ರಕಾಶನ ಸಂಸ್ಥೆಗಳು ಬಹಳ ಜನಪ್ರಿಯವಾಗಿ ಬೆಳೆದವು. ಅವುಗಳಲ್ಲಿ ಕೆಲವನ್ನು ಇಲ್ಲಿ ನೆನಪಿಸಿಕೊಳ್ಳಬಹುದಾದರೆ ಮೈಸೂರನ್ನು ಕೇಂದ್ರವಾಗಿರಿಸಿಕೊಂಡಿದ್ದ ಕಾವ್ಯಾಲಯ, ಡಿವಿಕೆ ಮೂರ್ತಿ, ಗೀತ ಬುಕ್ ಹೌಸ್, ಉಷಾ ಸಾಹಿತ್ಯ ಮಾಲೆ, ಶಾರದಾ ಮಂದಿರ, ಧಾರವಾಡ ಕೇಂದ್ರದ ಮನೋಹರ ಗ್ರಂಥಮಾಲೆ, ಸಮಾಜ ಪುಸ್ತಕಾಲಯ, ಮಿಂಚಿನಬಳ್ಳಿ ಪ್ರಕಾಶನ, ಹೆಗ್ಗೋಡಿನ ಅಕ್ಷರ ಪ್ರಕಾಶನ ಇತ್ಯಾದಿ. ಇಂದಿಗೂ ಕನ್ನಡ ಪುಸ್ತಕಲೋಕದಲ್ಲಿ ಪ್ರಕಟವಾಗಿರುವ ಪುಸ್ತಕಗಳನ್ನು ಇಂತಹ ಪ್ರಕಾಶಕರು ಪ್ರಕಟಣೆ ಮಾಡುತ್ತಿದ್ದರು ಎಂದು ನೆನಪಿಸಿಕೊಳ್ಳುವ ವಾಡಿಕೆ ಓದುಗ ವಲಯದಲ್ಲಿದೆ. ಕಾವ್ಯಾಲಯದ ಕೂಡಲಿ ಚಿದಂಬರಂ, ಡಿವಿಕೆ ಮೂರ್ತಿ ಪ್ರಕಾಶನದ ಡಿವಿಕೆ ಮೂರ್ತಿ, ಮನೋಹರ ಗ್ರಂಥಮಾಲದ ಜಿಬಿ ಜೋಷಿ, ಅಕ್ಷರ ಪ್ರಕಾಶನದ ಕೆ ವಿ ಸುಬ್ಬಣ್ಣ ಇಂತಹ ಹಲವರು ತಾವೇ ಸ್ವತಃ ಲೇಖಕರೂ ಆಗಿದ್ದರು ಮತ್ತು ಆಗಿನ ಬೌದ್ಧಿಕ ವಲಯದಲ್ಲಿ ಸಕ್ರಿಯವಾಗಿದ್ದ ವ್ಯಕ್ತಿಗಳು ಕೂಡ.

ಇವೆಲ್ಲದರ ಜೊತೆಗೆ ಕನ್ನಡದ ಖ್ಯಾತ ಸಾಹಿತಿಗಳು ತಮ್ಮ ಪುಸ್ತಕಗಳನ್ನು ತಾವೇ ಪ್ರಕಟಿಸಿಕೊಂಡು ಯಶಸ್ವಿ ಪ್ರಕಾಶನ ಸಂಸ್ಥೆಗಳನ್ನು ನಡೆಸಿದ ಉದಾಹರಣೆಗಳು ಇವೆ. ಮೊದಲು ಹೆಚ್ಚಾಗಿ ಕಾವ್ಯಾಲಯ ಪ್ರಕಾಶನದಲ್ಲಿ ತಮ್ಮ ಪುಸ್ತಕಗಳನ್ನು ಪ್ರಕಟಿಸುತ್ತಿದ್ದ ಕನ್ನಡದ ಖ್ಯಾತ ಸಾಹಿತಿ ಕುವೆಂಪು ನಂತರದಲ್ಲಿ ಉದಯರವಿ ಪ್ರಕಾಶನವನ್ನು ಸ್ಥಾಪಿಸಿ ತಮ್ಮ ಪುಸ್ತಕಗಳನ್ನು ತಾವೇ ಪ್ರಕಟಣೆ ಮಾಡುವ ಜವಾಬ್ದಾರಿ ಹೊತ್ತರು. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಜೀವನ ಕಾರ್ಯಾಲಯದಿಂದ ‘ಜೀವನ’ ಎಂಬ  ಪತ್ರಿಕೆ ಹೊರಡಿಸುತ್ತಿದ್ದರಲ್ಲದೆ, ಅವರ ಪುಸ್ತಕಗಳು ಕೂಡ ಅಲ್ಲಿಂದಲೇ ಪ್ರಕಟವಾಗುತ್ತಿದ್ದವು. ಅಲ್ಲದೆ ಹಲವು ಯುವ ಕವಿ, ಸಾಹಿತಿಗಳ ಮೊದಲ ಪುಸ್ತಕಗಳನ್ನು ಪ್ರಕಟಿಸಿದ ಹಿರಿಮೆ ಮಾಸ್ತಿ ಅವರದ್ದು. ಕೆ ಪಿ ಪೂರ್ಣಚಂದ್ರ ತೇಜಸ್ವಿ ಕೂಡ ತಮ್ಮ ಪುಸ್ತಕಗಳ ಪ್ರಕಾಶನಕ್ಕೆ ‘ಪುಸ್ತಕ ಪ್ರಕಾಶನ’ವನ್ನು ಹುಟ್ಟುಹಾಕಿದ್ದರು. ಲೇಖಕರೇ ತಮ್ಮ ಪುಸ್ತಕಗಳನ್ನು ಪ್ರಕಟ ಮಾಡಿ ಯಶಸ್ವಿ ಪ್ರಕಾಶನ ನಡೆಸುತ್ತಿರುವ ಉದಾಹರಣೆಗಳು ಈ ದಿನಕ್ಕೂ ಮುಂದುವರೆದಿದೆ. ಕಥೆಗಾರ ವಸುಧೇಂದ್ರ ಅವರ ಛಂದ ಪ್ರಕಾಶನ ಅಂತಹುದರಲ್ಲಿ ಒಂದು. ಛಂದ ಪ್ರಕಾಶನ ಕೂಡ ಮಾಸ್ತಿ ಅವರ ಜೀವನ ಕಾರ್ಯಾಲಯದ ಮಾದರಿಯಲ್ಲಿಯೇ ಮುಂದುವರೆದು, ಹಲವು ಕಥೆಗಾರರ ಮೊದಲ ಕಥಾಸಂಕಲನವನ್ನು ಪ್ರಕಟಿಸಿದೆ. ಇದಕ್ಕಾಗಿ ಪ್ರತಿ ವರ್ಷ ಛಂದ ಬಹುಮಾನ ಸ್ಪರ್ಧೆ ಏರ್ಪಡಿಸುವುದು, ಅದಕ್ಕೆ ಹಲವು ಹಸ್ತಪ್ರತಿಗಳು ಬರುವುದು, ಅದನ್ನು ತೀರ್ಪುಗಾರರ ತಂಡ ಅವಲೋಕಿಸಿ ಪ್ರಶಸ್ತಿ ನೀಡುವುದು ಹಲವು ವರ್ಷಗಳಿಂದ ನಡೆದುಬಂದಿದೆ.

ಈಗ ಈ ದಾರಿಯಲ್ಲಿ ಮತ್ತೊಬ್ಬ ಯುವಕರೊಬ್ಬರು ಯಶಸ್ವಿ ಹೆಜ್ಜೆ ಇಟ್ಟಿದ್ದಾರೆ. ಯುವ ಕವಿ-ಕಥೆಗಾರ-ಪತ್ರಕರ್ತ ಟಿ ಎಸ್ ಗೊರವರ್ ಎರಡು ವರ್ಷಗಳ ಹಿಂದೆಯಷ್ಟೇ ಸಂಗಾತ ಎಂಬ ಸಾಹಿತ್ಯ ಪತ್ರಿಕೆ ಪ್ರಾರಂಭಿಸಿದ್ದಲ್ಲದೆ ಅದೇ ಹೆಸರಿನ ಪ್ರಕಾಶನ ಸಂಸ್ಥೆಯನ್ನೂ ನಡೆಸುತ್ತಿದ್ದಾರೆ. ಅದರಲ್ಲಿ ಗೊರವರ್ ಅವರ ಪುಸ್ತಕಗಳ ಮರುಮುದ್ರಣ, ಅವರ ಹೊಸ ಪುಸ್ತಕಗಳನ್ನು ಪ್ರಕಟಿಸಿರುವುದಲ್ಲದೆ, ಹಲವು ಯುವ ಲೇಖಕರನ್ನೂ ಪ್ರಕಟಿಸಿ ಯಶಸ್ವಿಯಾಗಿ ಜನರಿಗೆ ಅವುಗಳನ್ನು ತಲುಪಿಸುವಲ್ಲಿ ಶ್ರಮವಹಿಸಿದ್ದಾರೆ. ಸಂಗಾತ ಪ್ರಕಾಶನದಲ್ಲಿ ಕನ್ನಡದ ಮಹತ್ವದ ಕಥೆಗಾರ ಕೇಶವ ಮಳಗಿ ಅವರ ಹಲವು ಪುಸ್ತಕಗಳು ಕೂಡ ಪ್ರಕಟವಾಗಿವೆ.

“ನಾನು ವಿಜಯಕರ್ನಾಟಕದಿಂದ ಕೆಲಸ ಬಿಟ್ಟ ನಂತರ, ಒಂದು ಸಾಹಿತ್ಯ ಪತ್ರಿಕೆ ಮಾಡುವ ಸ್ಪೂರ್ತಿ ಬಂದಿತು. ಆಗಷ್ಟೆ ಹಲವು ಸಾಹಿತ್ಯ ಪತ್ರಿಕೆಗಳು ಸ್ಥಗಿತಗೊಂಡಿದ್ದವು. ಈ ಕೊರತೆ ತುಂಬಬೇಕು ಅಂದುಕೊಂಡು ಸಂಗಾತ ತ್ರೈಮಾಸಿಕ ಪ್ರಾರಂಭಿಸಿದೆ. ಜನ ಬಹಳ ಪ್ರೀತಿಯಿಂದ ಸ್ವೀಕರಿಸಿದರು. ನಂತರ ನನ್ನ ಪುಸ್ತಕಗಳನ್ನು ಸಂಗಾತದಿಂದಲೇ ಯಾಕೆ ಪ್ರಕಟಿಸಬಾರದೆಂದುಕೊಂಡು ಪ್ರಾರಂಭವಾದ ಪುಸ್ತಕ ಪ್ರಕಾಶನ, ನನ್ನ ಆಸಕ್ತಿಯ ಜೊತೆಗೆ ದೊಡ್ಡದಾಗಿ ಬೆಳೆಯತೊಡಗಿತು. ವಿಲ್ಸನ್ ಕಟೀಲ್ ಕೊಂಕಣಿ ಕವಿ. ಸಂಗಾತ ಪತ್ರಿಕೆಗಾಗಿ ಅವರ ಕೆಲವು ಕವಿತೆಗಳನ್ನು ಅವರಿಂದಲೇ ಕನ್ನಡಕ್ಕೆ ಅನುವಾದ ಮಾಡಿಸಿ ಪ್ರಕಟಿಸಿದ್ದೆ. ಅವರ ಕವನಗಳು ನನಗೆ ಬಹಳ ಇಷ್ಟವಾಗಿ ಅವರ ಒಂದು ಸಂಕಲನವನ್ನು ಕನ್ನಡದಲ್ಲಿ ಪ್ರಕಟಿಸಲು ಮುಂದಾದೆ. ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ಹೀಗೆ ಒಳ್ಳೆಯ ವಿಷಯಗಳನ್ನು ಒಳಗೊಂಡ, ಸಂಗಾತದಿಂದ ಪ್ರಕಟಿಸಿರುವ ಎಲ್ಲ ಪುಸ್ತಕಗಳಿಗೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ವಿಜಯ್ ಹೂಗಾರ್ ಎಂಬ ಹೊಸ ಬರಹಗಾರರ ಮೊದಲ ಕಥಾ ಸಂಕಲನ ಪ್ರಕಟಿಸಿದ್ದೇನೆ. ಕೇಶವ ಮಳಗಿ ಅವರು ಸಂಪಾದಿಸಿಕೊಟ್ಟ ‘ಕಮೂ ತರುಣ ವಾಚಿಕೆ’ ನಮ್ಮ ಪ್ರಕಾಶನದಿಂದ ಬಳ ಬೇಡಿಕೆ ಪಡೆದ ಪುಸ್ತಕ” ಎಂದು ಗೊರವರ್ ತಮ್ಮ ಪ್ರಕಾಶನಗಾಥೆಯ ಅನುಭವವನ್ನು ಬಿಚ್ಚಿಡುತ್ತಾರೆ.

ಇದೇ ಸಮಯದಲ್ಲಿ ನೆನಪಾಗುವ ಮತ್ತೊಂದು ಪ್ರಕಾಶನ ಸಂಸ್ಥೆ ಮಂಡ್ಯದ ಸಂಕಥನ. ಸಂಕಥನ ಕೂಡ ಸಾಹಿತ್ಯ ಪತ್ರಿಕೆಯಾಗಿಯೇ ಪ್ರಾರಂಭವಾಗಿ ಪ್ರಕಾಶನಕ್ಕೆ ದಾಪುಗಾಲು ಇಟ್ಟಿದೆ. ಸ್ವತಃ ಕವಿಯಾಗಿರುವ ರಾಜೇಂದ್ರ ಪ್ರಸಾದ್ ಅವರ ‘ಬ್ರೆಕ್ಟ್ ಪರಿಣಾಮ’ದಂತಹ, ಇತ್ತೀಚಿನ ದಿನಗಳಲ್ಲಿ ಗಮನ ಸೆಳೆದ ಕವನ ಸಂಕಲನ ಸಂಕಥನದಿಂದಲೇ ಪ್ರಕಟವಾಗಿದೆ. ಅಲ್ಲದೆ ಪ್ರಬಂಧಕಾರ-ಸಾಹಿತಿ ಚಂದ್ರಶೇಖರ್ ಅಲೂರು ಅವರ ಪ್ರಬಂಧಗಳ ಸಂಕಲನ, ಹಿರಿಯ ಕವಿ ಎಚ್ ಎಸ್ ಶಿವಪ್ರಕಾಶ್ ಅವರ ‘ಬತ್ತೀಸ ರಾಗ’ ಆತ್ಮಕಥನಗಳ ಮರುಮುದ್ರಣ, ಯುವ ಲೇಖಕಿ ಪಲ್ಲವಿ ಇಡೂರು ಅವರ ‘ಜೊಲಾಂಟ’, ಎಚ್ ಎಸ್ ಶ್ರೀಮತಿ ಅನುವಾದಿಸಿರುವ ಸಿಮನ್ ಡಿ ಬೋವಾ ಅವರ ‘ಸೆಕಂಡ್ ಸೆಕ್ಸ್’ ಮರುಮುದ್ರಣ (ನಾಲ್ಕು ಸಂಪುಟಗಳಲ್ಲಿ) ಇಂತಹ ಸೃಜನೇತರ ಸಾಹಿತ್ಯ ಪ್ರಕಾಶನದಲ್ಲಿಯೂ ಸಕ್ರಿಯವಾಗಿದ್ದಾರೆ. ಹಾಗೆಯೇ ಯುವ ಕವಿಗಳ ಕವನಸಂಕಲನಗಳನ್ನು ಪ್ರಕಟ ಮಾಡುವುದರಿಂದ ಹಾಗೂ ಯುವಕರಲ್ಲಿ ಸೃಜನಶೀಲ ಸಾಹಿತ್ಯ ರಚನೆಗೆ ಉತ್ತೇಜಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕೂಡ ಕನ್ನಡ ಸಾಹಿತ್ಯ ಲೋಕದ ಗಮನ ಸೆಳೆಯುವುದರಲ್ಲಿ ಸಂಕಥನ ಯಶಸ್ವಿಯಾಗಿದೆ.

ಈ ಉತ್ಸಾಹಿ ಯುವಕರು ಸಾಂಪ್ರದಾಯಿಕ ಪ್ರಕಾಶಕ-ವಿತರಕ-ಪುಸ್ತಕದ ಅಂಗಡಿ ಮಾದರಿಯನ್ನಷ್ಟೇ ನಂಬಿಕೊಳ್ಳದೆ ನೇರವಾಗಿ ಜನರನ್ನು ತಲುಪಲು ಸಾಮಾಜಿಕ ಮಾಧ್ಯಮಗಳನ್ನು ಯಶಸ್ವಿಯಾಗಿ ತೊಡಗಿಸಿಕೊಂಡಿದ್ದಾರೆ. ಮತ್ತೆ ಈ ಮೇಲಿನ ಉದಾಹರಣೆಗಳಲ್ಲಿ ಕೂಡಲೇ ಗೋಚರವಾಗುವ ಸಂಗತಿ ಹೊಸ ಲೇಖಕರನ್ನು ಪರಿಚಯಿಸುವ ಅವರ ಕಮಿಟ್ಮೆಂಟ್ ಮತ್ತು ಸಾಮಾನ್ಯವಾಗಿ ‘ರಿಸ್ಕ್’ ಎಂದು ನಂಬಲಾಗಿರುವ ಸಾಹಿತ್ಯ ಪ್ರಕಾರದ ಪುಸ್ತಕಗಳನ್ನು ಬಹಳ ಪ್ರೀತಿಯಿಂದ ಪ್ರಕಟಿಸಿ ಅದೇ ಬದ್ಧತೆಯಿಂದ ಓದುಗರನ್ನು ತಲುಪಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವುದು.

ಹೀಗೆಯೇ ಬಹಳ ಮಾಡೆಸ್ಟ್ ಆಗಿ 2006ರಲ್ಲಿ ಪ್ರಾರಂಭವಾದ ಪಲ್ಲವ ಪ್ರಕಾಶನ ಸಂಸ್ಥೆ ಇಲ್ಲಿಯವರೆಗೂ ಸುಮಾರು 185 ಪುಸ್ತಕಗಳನ್ನು ಪ್ರಕಟಿಸಿ ಕನ್ನಡನಾಡಿನ ಜನಪರ ಕಾಳಜಿಯ ಮತ್ತು  ವಿಚಾರಪರ ಪ್ರಕಾಶನ ಸಂಸ್ಥೆಯಾಗಿ ಹೊರಹೊಮ್ಮಿದೆ. ರಾಜೇಶ್ವರಿ ಅವರು ಮಾಲೀಕರಾಗಿರುವ ಈ ಪ್ರಕಾಶನ ಸಂಸ್ಥೆಗೆ ಅವರ ಪತಿ ವೆಂಕಟೇಶ್ ಬೆನ್ನೆಲುಬಾಗಿ ನಿಂತಿದ್ದಾರೆ. “2006ರಲ್ಲಿ ಸ್ವಂತ ಅಕ್ಷರ ಪ್ರೀತಿಯಿಂದ ಪ್ರಾರಂಭವಾದ ನಮ್ಮ ಸಂಸ್ಥೆ ಆ ವರ್ಷ ಪ್ರಕಟ ಮಾಡಿದ್ದು ಒಂದೇ ಪುಸ್ತಕ. ಈಗ ಒಟ್ಟು 185 ಪುಸ್ತಕ ಪ್ರಕಟಿಸಿದ್ದೇವೆ. 2019 ರಲ್ಲಿ 13 ಪುಸ್ತಕ ಪ್ರಕಟ ಮಾಡಿದೆವು. ನಮ್ಮ ಪ್ರಕಾಶನದ ಹೆಗ್ಗಳಿಕೆ ಎಂದರೆ ಹಲವು ಹೊಸ ಲೇಖಕರನ್ನು ಪರಿಚಯಿಸಿರುವುದು. ಸುಮಾರು 20 ಕ್ಕೂ ಹೆಚ್ಚು ಲೇಖಕರ ಮೊದಲ ಪುಸ್ತಕ ಪ್ರಕಟಿಸಿದ್ದೇವೆ. ಹಾಗೂ ಕಾವ್ಯದ ಮೇಲಿನ ಪ್ರೀತಿಗೆ ರಿಸ್ಕ್ ಎಂದು ಪರಿಗಣಿಸಲಾಗುವ ಹೆಚ್ಚೆಚ್ಚು ಕವನ ಸಂಕಲನಗಳನ್ನು ಪ್ರಕಟ ಮಾಡಿದ್ದೇವೆ” ಎನ್ನುತ್ತರೆ ಪಲ್ಲವ ಪ್ರಕಾಶನದ ಮಾಲೀಕರು.

ಪ್ರೀತಿಯಿಂದ ಮಾಡುವ ಕೆಲಸಕ್ಕೆ ಲಾಭ ನಷ್ಟದ ಲೆಕ್ಕಾಚಾರ ಸುಳಿಯುವುದಿಲ್ಲ ಎನ್ನುವ ಅವರು “ನಾವು ಮೊಗಳ್ಳಿ ಗಣೇಶ್ ಅವರ ಪುಸ್ತಕಗಳನ್ನು ಪ್ರಕಟ ಮಾಡಿದಾಗ ನಮ್ಮ ಪ್ರಕಾಶನವನ್ನು ಹೆಚ್ಚು ಗಮನಿಸುವುದಕ್ಕೆ ಶುರು ಮಾಡಿದರು. ನಂತರ ನಟರಾಜ್ ಹುಳಿಯಾರ್ ಅವರ ‘ಇಂತಿ ನಮಸ್ಕಾರಗಳು’ ಪುಸ್ತಕ ಪ್ರಕಟವಾದ ನಾಲ್ಕೇ ದಿನಗಳಲ್ಲಿ ಮೊದಲ ಮುದ್ರಣ ಪ್ರತಿಗಳು ಖರ್ಚಾದವು” ಎಂದು ಯಶಸ್ಸಿನ ಕೆಲವು ಉದಾಹರಣೆಗಳನ್ನು ನೆನಪಿಸಿಕೊಳ್ಳುವ ಅವರು “ಲೋಹಿಯಾ ಮಾಲಿಕೆ, ಬುದ್ಧಿಸಂ ಮಾಲಿಕೆ – ಹೀಗೆ ವಿವಿಧ ಮಾಲಿಕೆಗಳನ್ನು ಪ್ರಕಟಿಸಿದ್ದೇವೆ” ಎಂದು ತಿಳಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಮೌಲಿಕ ಕೊಡುಗೆ ನೀಡಿರುವ ಬಗ್ಗೆ ಹೇಳುತ್ತಾರೆ.

ಕನ್ನಡ ಸ್ವತಂತ್ರ ಪ್ರಕಾಶನ ಲೋಕದಲ್ಲಿ ಮನೆಮಾತಾಗಿರುವ ಮತ್ತೆರಡು ಸಂಸ್ಥೆಗಳು ಅಭಿನವ ಮತ್ತು ಅಂಕಿತ ಪ್ರಕಾಶನ. ರವಿಕುಮಾರ್ ಮತ್ತು ಚಂದ್ರಿಕಾ ಅವರ ನೇತೃತ್ವದಲ್ಲಿ ಅಭಿನವ ಪ್ರಕಾಶನ ಗಂಭೀರ, ವೈಚಾರಿಕ, ಸಂಶೋಧನಾ ರೀತಿಯ ಪುಸ್ತಕಗಳನ್ನು ಪ್ರಕಟಿಸಿ ಜನರಿಗೆ ತಲುಪಿಸುವುದರಲ್ಲಿ ದಶಕಗಳಿಂದಲೂ ಎತ್ತಿದ ಕೈ. ಸಾಹಿತ್ಯ ವಿದ್ಯಾರ್ಥಿಗಳ – ಅಧ್ಯಾಪಕರ – ಗಂಭೀರ ಸಾಹಿತ್ಯ ಆಸಕ್ತರ ಸಂಶೋಧನೆಗ ಅನುಕೂಲವಾಗುವ ಪುಸ್ತಕಗಳನ್ನು ಹೇರಳವಾಗಿ ಅಭಿನವ ಪ್ರಕಾಶನ ಪ್ರಕಟಿಸಿದ್ದು, ಸೃಜನಶೀಲ ಕೃತಿಗಳನ್ನೂ ನಿಯತವಾಗಿ ಪ್ರಕಟಿಸಿದೆ. ಹಾಗೆಯೇ ಗಾಂಧಿಬಜಾರಿನಲ್ಲಿ ಪುಸ್ತಕದ ಅಂಗಡಿಯನ್ನೂ ಹೊಂದಿರುವ ಅಂಕಿತ ಪ್ರಕಾಶನ ಜಯಂತ ಕಾಯ್ಕಿಣಿ, ಚಂದ್ರಶೇಖರ್ ಕಂಬಾರ ಸೇರಿದಂತೆ ಹಲವು ಪ್ರಖ್ಯಾತ ಲೇಖಕರ ಹೆಚ್ಚು ಹೆಚ್ಚು ಪುಸ್ತಕಗಳನ್ನು ಪ್ರಕಟಿಸುವ ಸಂಸ್ಥೆ. ಇಲ್ಲಿಯವರೆಗೂ 500ಕ್ಕಿಂತಲೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿರುವ ಅಂಕಿತ ಪ್ರಕಾಶನ ಸಂಸ್ಥೆ ಹೆಚ್ಚು ಸೃಜನಶೀಲ ಸಾಹಿತ್ಯಕ್ಕೆ ಒತ್ತು ಕೊಟ್ಟಿದೆ. ಅಂಕಿತ ಪ್ರಕಾಶನ ಪುಸ್ತಕ ಮಳಿಗೆಗೆ ಹೊಕ್ಕರೆ ಓದುಗರ ಭೇಟಿಗೆ ಸಿಕ್ಕುವ ಪ್ರಕಾಶನದ ಸಂಸ್ಥಾಪಕ-ಮಾಲೀಕರಾದ ಪ್ರಕಾಶ್ ಕಂಬತ್ತಳ್ಳಿ ಮತ್ತು ಪ್ರಭಾ ಕಂಬತ್ತಳ್ಳಿ ಕನ್ನಡ ಓದುಗ ಲೋಕಕ್ಕೆ ಚಿರಪರಿಚಿತ ಹೆಸರುಗಳೇ.

ಕನ್ನಡದಲ್ಲಿ ಸದ್ಯಕ್ಕೆ ಬಹಳ ಸಕ್ರಿಯವಾಗಿರುವ ವಿಶಿಷ್ಟ ಪ್ರಕಾಶನಾಲಯ ಲಡಾಯಿ. ದಲಿತ ಸಾಹಿತ್ಯ, ವೈಚಾರಿಕ ಸಾಹಿತ್ಯದ ಪುಸ್ತಕಗಳೇ ಈ ಪ್ರಕಾಶನದಲ್ಲಿ ಹೆಚ್ಚು ಮೂಡಿಬಂದಿವೆ. ಪ್ರಭುತ್ವದ ದೌರ್ಜನ್ಯವನ್ನು ಖಂಡಿಸುವ ಜನಪರ ಕಾಳಜಿಯ ಪುಸ್ತಕಗಳ ದೊಡ್ಡ ಪಟ್ಟಿಯನ್ನೆ ಈ ಪ್ರಕಾಶನ ಹೊಂದಿದೆ.

ಲಡಾಯಿ ಪ್ರಕಾಶನದ ಪ್ರೀತಿಯ ಬಸು ಅವರ ಪೂರ್ಣ ಹೆಸರು ಬಸವರಾಜ ಸೂಳಿಬಾವಿ. ಸ್ವತಃ ಕವಿ ಮತ್ತು ಜನಪರ ಹೋರಾಟಗಾರರಾಗಿರುವ ಬಸು ಅವರು “ಇವತ್ತಿನ ಸಮಾಜ ಸಮಾನತೆಯ ಮೇಲೆ ನಿಂತಿರುವುದ್ದಲ್ಲ. ಈ ವರ್ಗಾಧಾರಿತ ಸಮಾಜದಲ್ಲಿ ಶೋಷಣೆ ಒಳಗಡೆ ಇಂದಲೇ ನಡೆಯುತ್ತದೆ. ಒಬ್ಬ ಮನುಷ್ಯ ಮತ್ತೊಬ್ಬನನ್ನು ತುಳಿಯುವ ವ್ಯವಸ್ಥೆಯಲ್ಲಿ ಲೇಖಕನ ಮತ್ತು ಪ್ರಕಾಶಕನ ಜವಾಬ್ದಾರಿ ಏನು ಎಂಬುದು ಮುಖ್ಯವಾಗುತ್ತದೆ. ಇಂತಹ ಅಸಮಾನ ಸಮಾಜವನ್ನು ಸರಿಪಡಿಸುವ ಬದ್ಧತೆ ಲೇಖಕನಿಗೆ ಕಾಡಬೇಕು. ಅಂತಹ ಆಶಯ ಇರುವ ಬರಹಗಾರರ ಬರಹಗಳನ್ನು ಪ್ರಕಟಿಸುವುದು ನಮ್ಮ ಪ್ರಕಾಶನದ ಆಶಯ. ಅಂತಹ ಜಾಗೃತಿ ಮೂಡಿಸುವ ಕಡೆಗೆ ನಮ್ಮ ಪ್ರಕಾಶನದ ಜವಬ್ದಾರಿ ಇದೆ.” ಎನ್ನುತ್ತಾರೆ. ಖ್ಯಾತ ಚಿಂತಕರಾದ ಆನಂದ್ ತೇಲ್ತುಂಬ್ಡೆ, ಎ ಜಿ ನೂರಾನಿ ಇಂತಹ ಹಲವು ಪ್ರಖರ ಚಿಂತಕರ ಪುಸ್ತಕಗಳ ಅನುವಾದಗಳನ್ನೂ ಬಸು ಪ್ರಕಟಿಸಿದ್ದಾರೆ.

ಕನ್ನಡದ ಪ್ರಕಾಶನದ ಮತ್ತೊಂದು ವಿಶಿಷ್ಟತೆ ಮತ್ತು ಒಂದು ರೀತಿಯಲ್ಲಿ ಕೊರತೆ ಪುಸ್ತಕಗಳ ಬೆಲೆ ನಿಗದಿಪಡಿಸುವ ನಿಟ್ಟಿನದ್ದು. ಇಂಗ್ಲಿಶ್ ಪುಸ್ತಕಗಳಿಗೆ ಹೋಲಿಸಿದರೆ ಕನ್ನಡ ಪುಸ್ತಕಗಳ ಬೆಲೆ ಬಹಳ ಕಡಿಮೆ. ಎಷ್ಟೋ ಪ್ರಕಾಶನ ಸಂಸ್ಥೆಗಳು ಮುದ್ರಣ ಖರ್ಚು, ಇತರ ಲಾಜಿಸ್ಟಿಕ್ಸ್ ಖರ್ಚು ವಾಪಸ್ ಪಡೆದುಕೊಂಡರೆ ಸಾಕು ಎನ್ನುವ ರೀತಿಯಲ್ಲಿ ಪುಸ್ತಕಗಳಿಗೆ ಬೆಲೆ ಇಡುತ್ತಾರೆ. ಸದ್ಯಕ್ಕೆ ಕನ್ನಡ ಪ್ರಕಾಶನದ 100 ಪುಟದ ಪುಸ್ತಕದ ಸರಾರರಿ ಬೆಲೆ 100 ರೂ ಇರುತ್ತದೆ. ಪುಸ್ತಕದ ಪುಟಗಳು ಹೆಚ್ಚಾದಂತೆ ಅದೇ ಸರಾಸರಯಲ್ಲಿ ಬೆಲೆಯೂ ಹೆಚ್ಚಾಗುವುದನ್ನು ಸುಲಭವಾಗಿ ಗಮನಿಸಬಹುದು. ಇತ್ತೀಚೆಗೆ ಪುಸ್ತಕದ ಬೆಲೆ ತುಸು ಹೆಚ್ಚಾಗಿರುವ ವಿದ್ಯಮಾನವನ್ನು ಖಂಡಿಸಿ ಸಾಮಾಜಿಕ ಮಾಧ್ಯಮದಲ್ಲಿ ಒಂದು ದೊಡ್ಡ ಚರ್ಚೆಯೇ ಆಯಿತು. ಹೆಚ್ಚುತ್ತಿರುವ ಕಾಗದದ ಬೆಲೆ, ಮುದ್ರಣದ ಬೆಲೆ ಹಾಗೂ ಮುದ್ರಣದ ಒಂದು ಸಾವಿರ ಪ್ರತಿಗಳನ್ನು ಮಾರಾಟ ಮಾಡಲು ತೆಗೆದುಕೊಳ್ಳುವ ದೀರ್ಘ ಸಮಯವನ್ನು ಗಣನೆಗೆ ತೆಗೆದುಕೊಂಡರೆ ಇನ್ನೂ ಹೆಚ್ಚಿನ ದರ ನಿಗದಿಪಡಿಸಬೇಕು ಎಂಬ ಹಲವು ಪ್ರಕಾಶಕರ ವಾದವನ್ನು ಒಂದು ಓದುಗ ವಲಯ ಒಪ್ಪಿಕೊಳ್ಳದೆ ಖಂಡಿಸಿ, ಪ್ರಕಾಶನ ಜ್ಞಾನ, ತಿಳಿವನ್ನು ಪ್ರಸರಿಸುವ ಮಾರ್ಗವಾಗಬೇಕೇ ಹೊರತು ಲಾಭದ ಉದ್ಯಮವಾಗಬಾರದು ಎಂಬ ನಿಲುವು ತಳೆದು ನಿಂತಿತು.

ಕನ್ನಡ ಪ್ರಕಾಶನದಲ್ಲಿ ಪುಸ್ತಕದ ಬೆಲೆಯನ್ನು ಸರಾಸರಿಗಿಂತಲೂ ಕಡಿಮೆ ದರ ನಿಗದಿಪಡಿಸುವ ಕೆಲವು ಪ್ರಕಾಶನ ಸಂಸ್ಥೆಗಳು ಇವೆ. ಅವುಗಳಲ್ಲಿ ಥಟ್ಟನೆ ಹೊಳೆಯುವುದು ಚನ್ನಬಸವಣ್ಣನವರ ಲೋಹಿಯಾ ಪ್ರಕಾಶನ ಮತ್ತು ಲಡಾಯಿ ಪ್ರಕಾಶನ. ಪುಸ್ತಕದ ಬೆಲೆಯನ್ನು ಜನರಿಗೆ ಎಟಕುವ ಬೆಲೆಯಲ್ಲಿ ನಿಗದಿಪಡಿಸುವುದು ಅತಿಮುಖ್ಯ ಎಂದು ಬಣ್ಣಿಸುವ ಲಡಾಯಿ ಪ್ರಕಾಶನದ ಬಸು ಅವರು “ಪುಸ್ತಕದ ಬೆಲೆ ಎಂದಿಗೂ ಜನಕ್ಕೆ ದುಬಾರಿ ಎನ್ನಿಸಬಾರದು. ಆದುದರಿಂದ ನಾವು ಸಸ್ಟೇನ್ ಆಗುವ ದೃಷ್ಟಿಯಿಂದ ಮಾತ್ರ ಪುಸ್ತಕದ ಬೆಲೆ ನಿಗದಿಪಡಿಸುತ್ತೇವೆ. ಲಾಭದ ದೃಷ್ಟಿಯಿಂದ ನಾವು ನಮ್ಮ ಬೌದ್ಧಿಕ ಜವಾಬ್ದಾರಿ ನಿರ್ವಹಿಸಲು ಸಾಧ್ಯವಿಲ್ಲ. ಜನಕ್ಕೆ ಜಾಗೃತಿ ಮೂಡಿಸುವುದು ಮುಖ್ಯ” ಎನ್ನುತ್ತಾರೆ.

ಹೆಸರಿಗೆ ತಕ್ಕಂತೆ ಕನ್ನಡ ಪುಸ್ತಕೋದ್ಯಮದಲ್ಲಿ ಅಹರ್ನಿಶಿ ಶ್ರಮಿಸುತ್ತಿರುವ ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ. ಸ್ವತಃ ಕವಿ-ಕಥೆಗಾರ್ತಿಯಾಗಿರುವ ಅಕ್ಷತಾ ಅವರು ನಿಯತವಾಗಿ ಪ್ರಕಟಿಸುವ ಪುಸ್ತಕಗಳು ಕಡಿಮೆ ಅವಧಿಯಲ್ಲಿ ಓದುಗರ ಗಮನ ಸೆಳೆದಿವೆ. ಅಹರ್ನಿಶಿ ಬಳಗವೊಂದನ್ನು ಸೃಷ್ಟಿಸಿಕೊಂಡು ಅವರಿಗೆ ತಮ್ಮ ಪ್ರಕಾಶನದ ಪುಸ್ತಕಗಳನ್ನು ನಿರಂತರವಾಗಿ ತಲುಪಿಸುವ ಕೆಲಸದ ಮೂಲಕ ತಮ್ಮ ಕಾರ್ಯಕ್ಕೆ ಬೆಂಬಲವನ್ನೂ ಪಡೆದುಕೊಳ್ಳುತ್ತಿದ್ದಾರೆ. ಹಲವು ಜನಪರ ಕಾರ್ಯಕ್ರಮಗಳಲ್ಲಿ, ಸಾಹಿತ್ಯ-ಸಿನೆಮಾ ಗೋಷ್ಟಿಗಳಲ್ಲಿ ಮಳಿಗೆಗಳನ್ನು ಹಾಕಿ ಜನರಿಗೆ ತಮ್ಮ ಪುಸ್ತಕಗಳನ್ನು ಪರಿಚಯಿಸುತ್ತಿರುವ ಕೆಲಸವನ್ನು ಅಕ್ಷತ ಮುಂಚೂಣಿಯಲ್ಲಿ ನಿರ್ವಹಿಸುತ್ತಿದ್ದಾರೆ.

ಪ್ರಕಟನೆಯನ್ನು ಸ್ವಂತ ಆಸಕ್ತಿಗಷ್ಟೇ ಅಲ್ಲದೆ ಅದನ್ನು ಸಂಘಟಿತವಾಗಿ ಬೆಳೆಸಬೇಕು ಎಂಬ ಆಶಯದೊಂದಿಗೆ ಕೆಲಸ ಮಾಡುತ್ತಿರುವುದು ಸೃಷ್ಟಿ ಪ್ರಕಾಶನದ ನಾಗೇಶ್. ಪ್ರಕಾಶಕರಿಗೆ ಸರ್ಕಾರದಿಂದ ಸಿಗಬೇಕಾದ ಬೆಂಬಲ ಮತ್ತು ಸವಲತ್ತುಗಳ ಬಗ್ಗೆ ಆಸಕ್ತಿವಹಿಸಿ ಅದಕ್ಕಾಗಿ ಹೋರಾಡಲು ಸದಾ ಮುಂದಿರುವ ವ್ಯಕ್ತಿ ನಾಗೇಶ್. ಪ್ರಕಾಶಕರ ಸಂಘವೊಂದನ್ನು ಸ್ಥಾಪಿಸಲು ಕೂಡ ಶ್ರಮಿಸಿದ್ದವರು. ಗ್ರಂಥಾಲಯದ ಚಟುವಟಿಕೆಗಳ ಬಗ್ಗೆ ಪ್ರಕಾಶಕರಿಗೆ ಅರಿವು ಮೂಡಿಸಲು ಸದಾ ಸಕ್ರಿಯವಾಗಿರುವ ನಾಗೇಶ್, ತಮ್ಮ ಪ್ರಕಟಣೆಯ ಆಯ್ಕೆಯಲ್ಲಿಯೂ ಗಮನ ಸೆಳೆದಿರುವ ವ್ಯಕ್ತಿ. ಹೆಚ್ಚು ಅನುವಾದಗಳನ್ನು ಪ್ರಕಟಿಸುವಲ್ಲಿ ನಾಗೇಶ್ ಕನ್ನಡ ಪ್ರಕಾಶನ ಉದ್ಯಮದಲ್ಲಿ ಗುರುತಿಸಿಕೊಂಡಿದ್ದಾರೆ.

ಹೀಗೆ ವೈವಿಧ್ಯಮಯವಾದ ಪ್ರಕಾಶನಗಳನ್ನು ಹೊಂದಿದ್ದರೂ ಕನ್ನಡ ಪ್ರಕಾಶನ ಲೋಕ ಹಲವು ಸಮಸ್ಯೆಗಳಿಂದ ಬಳಲುತ್ತಿರುವುದು ಕೂಡ ಅಷ್ಟೇ ದಿಟ. ಕನ್ನಡ ಪ್ರಕಾಶನ ಲೋಕ ಒಂದು ವ್ಯವಸ್ಥಿತವಾದ ಮಾರಾಟ ಜಾಲವನ್ನು ಹೊಂದಿಲ್ಲ. ಕರ್ನಾಟಕದಲ್ಲಿ ಅತಿ ದೊಡ್ಡ ವಿತರಣ ಸಂಸ್ಥೆ ನವಕರ್ನಾಟಕ ಸ್ವತಃ ಪ್ರಕಾಶಕರು ಕೂಡ. ನವಕರ್ನಾಟಕ ಹಲವು ಹೊಸ ಪ್ರಕಾಶನ ಸಂಸ್ಥೆಗಳ ಬೆನ್ನಿಗೆ ನಿಂತು ಸಹಾಯ ಮಾಡಿರುವುದಲ್ಲಿ ಎರಡು ಮಾತಿಲ್ಲದಿದ್ದರೂ, ಪ್ರಕಾಶನ ಚಟುವಟಿಕೆ ಹೊಂದಿರದ ವಿತರಕನೊಬ್ಬ ಹುಟ್ಟಿಕೊಂಡಿದ್ದರೆ ಕನ್ನಡ ಪ್ರಕಾಶನ ಲೋಕ ಇನ್ನಷ್ಟು ವಿಸ್ತರಣೆಗೊಳ್ಳುವ ಸಾಧ್ಯತೆ ಇತ್ತು ಎಂಬ ಮಾತೂ ಚಾಲ್ತಿಯಲ್ಲಿದೆ.

ಹಾಗೆಯೇ ಬೆಂಗಳೂರು ಕರ್ನಾಟಕದ ದೊಡ್ಡ ವ್ಯವಹಾರಿಕ ನಗರ. ಕಾಸ್ಮೋಪಾಲಿಟನ್ ಸ್ವಭಾವದ ನಗರಿಯೂ ಹೌದು. ಮೊದಲಿನಿಂದಲೂ ಬಹುಭಾಷಿಕರ ಬೀಡಾಗಿರುವ ಬೆಂಗಳೂರು, ಕನ್ನಡ ಪುಸ್ತಕ ಮಾರಾಟದ ಪಾಲಿಗೆ ಹಾಟ್ ಸ್ಪಾಟ್ ಎನೂ ಅಲ್ಲ. ಒಂದು ಸಣ್ಣ ಹೋಲಿಕೆಯನ್ನು ಇಲ್ಲಿ ಮಾಡಬಹುದಾದರೆ ಜನವರಿ ಮಧ್ಯಭಾಗದಲ್ಲಿ ಚೆನ್ನೈನಲ್ಲಿ ನಡೆಯುವ ಬೃಹತ್ ಪುಸ್ತಕ ಮೇಳದಲ್ಲಿ ಸುಮಾರು 70% ಮಳಿಗೆಗಳು ಸಂಪೂರ್ಣವಾಗಿ ತಮಿಳು ಪುಸ್ತಕಗಳನ್ನು ಮಾರಾಟ ಮಾಡುವವಾಗಿರುತ್ತವೆ. ಅಲ್ಲಿ ಮಳಿಗೆ ಹಾಕುವ ಪ್ರಕಾಶಕನಿಗೆ ಅದು ಜೀವಜಲವಿದ್ದಂತೆ. ಆದರೆ ಬೆಂಗಳೂರಿನಲ್ಲಿ ನಡೆಯುವ ಅಂತರಾಷ್ಟ್ರೀಯ ಪುಸ್ತಕ ಮಳಿಗೆಗಳಲ್ಲಿ ಶೇಕಡಾ 10% ಕನ್ನಡ ಪುಸ್ತಕ ಮಳಿಗೆಗಳು ಸಿಗುವುದು ದುರ್ಲಭ. ಅಲ್ಲದೆ ಸಾಮಾನ್ಯವಾಗಿ ವರ್ಷಕ್ಕೊಮ್ಮೆ ಕರ್ನಾಟಕದ ಯಾವುದಾದರೂ ಜಿಲ್ಲಾ ಕೇಂದ್ರವೊಂದರಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹೊರತು ಪಡಿಸಿದರೆ, ಪ್ರಕಾಶಕರಿಗೆ ತಮ್ಮ ಪುಸ್ತಕಗಳನ್ನು ಜನರಿಗೆ ಪ್ರದರ್ಶನ ಮಾಡುವ, ಪರಿಚಯಿಸುವ ಇಂತಹ ದೊಡ್ಡ ವೇದಿಕೆಯ ಬೇರೆ ಪುಸ್ತಕದ ಉತ್ಸವಗಳು ಇಲ್ಲವೇ ಇಲ್ಲ ಎನ್ನುವಷ್ಟು ವಿರಳ ಇಲ್ಲಿ. ಕನ್ನಡ ಪುಸ್ತಕ ಮಾರಾಟ ಮಾಡುವ ಒಂದು ಪುಸ್ತಕ ಮಳಿಗೆ ಪ್ರತಿ ಜಿಲ್ಲೆಯಲ್ಲೂ ಒಂದಿದೆ ಅಂತಲೂ ಇಲ್ಲ.

ಕನ್ನಡ ಪ್ರಕಾಶನ ಲೋಕದಲ್ಲಿ ಪುಸ್ತಕಗಳ ಪ್ರಿಂಟ್ ರನ್ ಸರಾಸರಿಯಾಗಿ ಇಂದಿಗೂ 1000 ಪುಸ್ತಕಗಳನ್ನು ಮೀರಿಲ್ಲ. ವರ್ಷಗಳು ಕಳೆದಂತೆ ಅದು 500 ಕ್ಕೂ ಇಳಿಯುತ್ತಿದೆ. ಆ ಸಾವಿರ ಪುಸ್ತಕಗಳನ್ನೇ ರೀಟೇಲ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸರಾಸರಿ 2-5 ವರ್ಷ ಹಿಡಿಯುತ್ತದೆ ಎನ್ನುವುದು ಹಲವು ಪ್ರಕಾಶಕರ ಅಳಲು. ಇತ್ತೀಚೆಗೆ ಸರ್ಕಾರದ ಹಲವು ಯೋಜನೆಯಲ್ಲಿ ಪುಸ್ತಕಗಳನ್ನು ಖರೀದಿ ಮಾಡುತ್ತಿರುವ ಬೆಂಬಲದಿಂದ ಪ್ರಕಾಶಕರು ಗೆಲುವುನಿಂದ ಇದ್ದರೂ, ಅದು ರೀಟೆಲ್ ಮಾರಾಟ ಜಾಲದ ಮೂಲಕ ದೊಡ್ಡ ಸಂಖ್ಯೆಯ ಪುಸ್ತಕಗಳನ್ನು ಮಾರುವ ಆತ್ಮವಿಶ್ವಾಸ ಮೂಡದ ಹೊರತು ಅನಿಶ್ಚಿತತೆ ಪುಸ್ತಕೋದ್ಯಮದಲ್ಲಿ ಇದ್ದೇ ಇರುತ್ತದೆ.

ಇತ್ತೀಚೆಗೆ ಹಲವು ಪ್ರಕಾಶಕರು ಆನ್ಲೈನ್ ನಲ್ಲಿ ಮಾರಾಟಜಾಲವನ್ನು ಹೊಂದಿದ್ದು (ವಾಟ್ಸ್ ಆಪ್, ಫೇಸ್ಬುಕ್, ಇನ್ಸ್ಟಾ ಮೋಜೋ, ಅಂತರ್ಜಾಲ ತಾಣಗಳು) ಜನರಿಗೆ ನೇರವಾಗಿ ಪುಸ್ತಕಳನ್ನು ತಲುಪಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಒಂದು ಕಡೆ ಬಹಳ ಸಹಕಾರಿ-ಸಹಾಯಕಾರಿ ವ್ಯವಸ್ಥೆ ಆಗಿದ್ದರೂ, ಜನರು ಪುಸ್ತಕದ ಅಂಗಡಿಗಳನ್ನು ಹೊಕ್ಕುವ, ಪುಸ್ತಕಗಳನ್ನು ಬ್ರೌಸ್ ಮಾಡುವ, ಮುಖಪುಟ, ಬೆನ್ನುಡಿ- ಮುನ್ನುಡಿಗಳನ್ನು ನೋಡಿ ಪುಸ್ತಕಗಳನ್ನು ಕೊಳ್ಳುವ ಒಡನಾಟಕ್ಕೆ ಒಂದು ಸಣ್ಣ ಬ್ರೇಕ್ ಹಾಕುವಲ್ಲಿ ಕೂಡ ಅದು ಸಾಗಿದೆ. ಓದುಗರ ಮತ್ತು ಪುಸ್ತಕಗಳ ನಡುವೆ ಈ ಸಾವಯವ ಸಂಬಂಧ ಇಲ್ಲದ ಹೊರತು ಪ್ರಕಾಶಕರು ಶಿಪಾರಸ್ಸು ಮಾಡಿ ಓದುಗ ಪುಸ್ತಕ ಕೊಳ್ಳುವ ವ್ಯವಸ್ಥೆ ಮಾತ್ರವೇ ಇಡೀ ಪುಸ್ತಕೋದ್ಯಮದ ಪಾಲಿಗೆ ಆಶಾದಾಯಕವಗಿರಲಾರದು. “ಹಲವು ಪುಸ್ತಕದ ಅಂಗಡಿಗಳಿಗೆ ರೆಗ್ಯುಲರ್ ಆದ ಓದುಗರು ಇರುತ್ತಾರೆ. ಆದುದರಿಂದ ಸಾಂಪ್ರದಾಯಿಕವಾಗಿ ಪುಸ್ತಕದ ಅಂಗಡಿಗಳ ಮೂಲಕ ಪುಸ್ತಕಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಆದರೆ ಯಾವ ಅಂಗಡಿಗೂ ಹೋಗದ ಎಷ್ಟೋ ಅಜ್ಞಾತ ಓದುಗರನ್ನು ಟ್ಯಾಪ್ ಮಾಡುವ ಅಗತ್ಯವೂ ಇದೆ. ಆ ನಿಟ್ಟಿನಿಂದ ನೇರ ಓದುಗರ ಜೊತೆಗೆ ಪ್ರಕಾಶಕರು ಸಂಪರ್ಕ ಇಟ್ಟುಕೊಳ್ಳುವುದು ಅತಿ ಮುಖ್ಯ ಎನ್ನುತ್ತಾರೆ ಸಂಗಾತದ ಗೊರವರ್.

“ಎಷ್ಟೋ ಬಾರಿ ಪುಸ್ತಕದ ಅಂಗಡಿಗಳು ಕಡಿಮೆ ಸಂಖ್ಯೆಯಲ್ಲಿ ಮಾರಾಟವಾಗುವ ಪುಸ್ತಕಗಳನ್ನು ಸದಾ ಸ್ಟಾಕ್ ಇಟ್ಟಿರುವುದಿಲ್ಲ. ಅಂತಹ ಸಮಯದಲ್ಲಿ ಪ್ರಕಾಶಕರಿಗೆ ನೇರ ಓದುಗರಿಗೆ ತಲುಪಿಸುವ ಆಯ್ಕೆ ಒಂದೇ ಇರುತ್ತದೆ. ಆ ನಿಟ್ಟಿನಲ್ಲಿ ನಾನು ಸಾಮಾಜಿಕ ಮಾಧ್ಯಮಗಳನ್ನು ಸಶಕ್ತವಾಗಿ ಬಳಸಿಕೊಂಡಿದ್ದೇನೆ ಮತ್ತು ಅಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಯಶಸ್ಸು ಕಂಡಿದ್ದೇನೆ” ಎಂದು ಗೊರವರ್ ಬಣ್ಣಿಸುತ್ತಾರೆ.

“ಇಂದಿನ ದಿನಗಳಲ್ಲಿ ನಮ್ಮ ಪುಸ್ತಕಗಳನ್ನು ಓದುವ ಬಳಗಕ್ಕೆ ಅವರ ಕೆಲಸಗಳ ನಡುವೆ, ಹೋರಾಟದ ಚಟುವಟಿಕೆಗಳ ನಡುವೆ ಪುಸ್ತಕದ ಅಂಗಡಿಗಳಿಗೆ ಹೋಗಿ ಅವುಗಳನ್ನು ಕೊಳ್ಳುವ ಸಮಯ ಇಲ್ಲದಾಗಿರುತ್ತದೆ. ಕೆಲವೊಮ್ಮೆ ವ್ಯವಧಾನವೂ ಇರುವುದಿಲ್ಲ. ಆದುದರಿಂದ ನಾವು ನೇರವಾಗಿ ಪುಸ್ತಕಗಳನ್ನು ತಲುಪಿಸುವ ವ್ಯವಸ್ಥೆ ಮಾಡಿಕೊಂಡಿದ್ದೇವೆ” ಎನ್ನುತ್ತಾರೆ ಲಡಾಯಿ ಪ್ರಕಾಶನದ ಬಸು.

ಕನ್ನಡ ಪ್ರಕಾಶನ ಲೋಕ ಎದುರಿಸುತ್ತಿರುವ ಮತ್ತೊಂದು ಸಮಸ್ಯೆ ಸಣ್ಣ ಸಾಹಿತ್ಯ ಪತ್ರಿಕೆಗಳ ಕೊರತೆ. ಸದ್ಯಕ್ಕೆ ಬಹಳ ಸಕ್ರಿಯವಾಗಿರುವ ಸಾಹಿತ್ಯ ಪತ್ರಿಕೆ ಸಂಗಾತ. ಸಂಕಥನ ಬಹಳ ಭರವಸೆ ಮೂಡಿಸಿ, ಸ್ಥಗಿತಗೊಂಡಿತ್ತು. ಈಗ ಮತ್ತೆ ಪ್ರಾರಂಭವಾಗುವ ಭರವಸೆಯೂ ಇದೆ. ಚಂಪಾ ಸಂಪಾದಿಸುವ ಸಂಕ್ರಮಣ ಬಹಳ ಕಾಲದಿಂದಲೂ ಕನ್ನಡ ಸಾಹಿತ್ಯ ಲೋಕದಲ್ಲಿ ನೆಲೆ ನಿಂತಿರುವ ಪತ್ರಿಕೆ. ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಿದ್ದ ಪ್ರಹ್ಲಾದ್ ಅವರ ಸಂಚಯ ಬಾಗಿಲು ಮುಚ್ಚಿದೆ. ಸಾಕ್ಷಿ, ರುಜುವಾತು, ಶಬ್ದಗುಣ, ಸಮೀಕ್ಷೆ, ಲಹರಿ, ಅಂಕಣ, ದೇಶಕಾಲ, ಪುಸ್ತಕಮನೆ ಹೀಗೆ ಕನ್ನಡ ಸಾಹಿತ್ಯದ-ಬರಹಗಾರರ ಅನ್ವೇಷಕರಾಗಿದ್ದ ಸಾಹಿತ್ಯ ಪತ್ರಿಕೆಗಳ್ಯಾವುವೂ ಈಗ ಸಕ್ರಿಯವಾಗಿಲ್ಲ. ಇಂತಹ ಸಾಹಿತ್ಯ ಪತ್ರಿಕೆಗಳನ್ನು ಆರ್ಥಿಕತೆ ದೃಷ್ಟಿಯಿಂದ ಯಶಸ್ವಿಯಾಗಿ ನಿಭಾಯಿಸಬಲ್ಲೆ ಎಕೋಸಿಸ್ಟಮ್ ಕನ್ನಡದಲ್ಲಿ ಇನ್ನೂ ಬೆಳೆದಿಲ್ಲ ಎಂದೇ ಹೇಳಬಹುದು. ಎಂದಿಗೂ ಹೊಸ ಲೇಖಕರನ್ನು ಹುಡುಕುವ, ಬೆಳಕಿಗೆ ತರುವ ನಿಟ್ಟಿನಲ್ಲಿ ಸಾಹಿತ್ಯ ಪತ್ರಿಕೆಗಳು ಕೆಲಸ ಮಾಡುತ್ತಿರುತ್ತವೆ. ಇಂತಹ ಪತ್ರಿಕೆಗಳು ಹೆಚ್ಚಾದರೆ ಕನ್ನಡ ಪ್ರಕಾಶನ ಲೋಕ ಇನ್ನಷ್ಟು ವೈಬ್ರಾಂಟ್ ಆಗುವುದರಲ್ಲಿ ಸಂದೇಹವಿಲ್ಲ.

ಇದರ ಜೊತೆಗೆ ಸೃಜನಶೀಲ ಸಾಹಿತ್ಯಕ್ಕೆ, ಪುಸ್ತಕ ವಿಮರ್ಶೆಗಳಿಗೆ ಸ್ಥಳಾವಕಾಶ ಮಾಡಿಕೊಡುತ್ತಿದ್ದ, ದೊಡ್ಡ ಪ್ರಸಾರವಿರುವ ಕನ್ನಡದ ದಿನಪತ್ರಿಕೆಗಳ ಸಾಪ್ತಾಹಿಕ ಪುರವಣಿಗಳು, ಆ ಸ್ಥಳವನ್ನು ಕ್ರಮೇಣವಾಗಿ ಕಿರಿದಾಗಿಸುತ್ತಾ ಬಂದಿವೆ. ಈ ವಿದ್ಯಮಾನ ಅಂತೂ ಯಕ್ಷಪ್ರಶ್ನೆಯಾಗಿದೆ. ಪಶ್ಚಿಮ ದೇಶಗಳಲ್ಲಿ ಪ್ರಕಟವಾಗುವ ಹಲವು ಪತ್ರಿಕೆಗಳಲ್ಲಿ ಇಂದಿಗೂ ಸಾಹಿತ್ಯ-ಸಿನೆಮಾ-ಸಂಗೀತದ ಬಗ್ಗೆ ಬರಹಗಳಿಗೆ ಇಂದಿಗೂ ಗಮನಾರ್ಹವಾದ ಜಾಗ ಇದೆ. ಇದೆ ಕನ್ನಡದ ಮಟ್ಟಿಗೆ ಕ್ಷೀಣಿಸುತ್ತಿರುವುದೇಕೆ? ಓದುಗರು ಇಲ್ಲವಂತಲೇ? ಆ ಓದುಗರನ್ನು ಸರಿ ದಾರಿಯಲ್ಲಿ ಇನ್ಫಾರ್ಮ್ ಮಾಡುವುದು ಇಂತಹ ಪತ್ರಿಕೆಗಳ ಕೆಲಸವಲ್ಲವೇ? ಇದಕ್ಕೆ ಸಾಹಿತ್ಯ – ಸಿನೆಮಾ – ಸಂಗೀತ ಮುಖ್ಯ ಅಲ್ಲವೇ? ಹೀಗೆ ಕೋಳಿ ಮೊದಲಾ ಮೊಟ್ಟೆ ಮೊದಲಾ ಎಂಬ ಪ್ರಶ್ನೆ ಇಂತಹ ವ್ಯಾಜ್ಯಗಳ ಜೊತೆಗೆ ಬಂದು ನಿಲ್ಲುತ್ತವೆ.

ನೆಲಮಂಗಲವನ್ನು ಕೇಂದ್ರವಾಗಿಸಿಕೊಂಡಿರುವ ಪ್ರಕಾಶ್ ಅವರ ವಂಶಿ ಪ್ರಕಾಶನ, ಮೈಸೂರಿನಿಂದ ಮಹೇಶ್ ಅವರ ರೂಪ ಪ್ರಕಾಶನ, ಚಂದ್ರು ಅವರ ಸಿವಿಜಿ ಪ್ರಕಾಶನ, ಗಿರಿರಾಜ್ ಅವರ ಕಣ್ವ ಪ್ರಕಾಶನ, ಹೇಮಂತ ಪ್ರಕಾಶನ, ವಸಂತ ಪ್ರಕಾಶನ ಹೀಗೆ ಹಲವು ಸ್ವತಂತ್ರ ಪ್ರಕಾಶಕರಲ್ಲಿ ಕೆಲವರು ಇನ್ನೂ ಚಿಕ್ಕ ಮಟ್ಟದಲ್ಲಿ ಇನ್ನೂ ಕೆಲವರು ಬೃಹತ್ತಾಗಿ ಬೆಳೆದು ಕನ್ನಡದ ವಿವಿಧ ಓದುಗ ವಲಯವನ್ನು ತಲುಪಿವೆ. ಇನ್ನೂ ಹತ್ತಾರು ಪ್ರಕಾಶಕರ ಹೆಸರುಗಳನ್ನು ಇಲ್ಲಿ ನೆನಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರನ್ನೂ ಒಳಗೊಂಡು ಅವಲೋಕಿಸುವ ಅಗತ್ಯ ಕನ್ನಡ ಪುಸ್ತಕೋದ್ಯಮದ ಒಳಿತಿನ ದೃಷ್ಟಿಯಿಂದ ಮುಖ್ಯವಾಗಿದೆ. ಒಟ್ಟಿನಲ್ಲಿ ಹಲವು ಸಮಸ್ಯೆಗಳಿಂದ ಕೂಡಿದ್ದರೂ ಹೊಸದನ್ನು ಅನ್ವೇಷಿಸುವಲ್ಲಿ ಕನ್ನಡ ಸ್ವತಂತ್ರ ಪ್ರಕಾಶಕರು ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾರೆ.

***

ಗುರುಪ್ರಸಾದ್ ಡಿ ಎನ್, ಲೇಖಕರು ಸಾಫ್ಟ್ ವೇರ್ ಎಂಜಿನಿಯರ್ ವೃತ್ತಿಯನ್ನು ತೊರೆದು ಪ್ರಕಾಶನ ಮತ್ತು ಪುಸ್ತಕ ಮಾರಾಟಕ್ಕೆ ಧುಮುಕಿದವರು. ಆಕೃತಿ ಪ್ರಕಾಶನದಿಂದ ಇಲ್ಲಿಯವರೆಗೂ ಸುಮಾರು 30 ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿರುವುದಲ್ಲದೆ 10 ವರ್ಷದಿಂದ ಬೆಂಗಳೂರಿನ ರಾಜಾಜಿನಗರದಲ್ಲಿ ಪುಸ್ತಕಮಳಿಗೆಯನ್ನು (ಹಳೆಯ ಮತ್ತು ಹೊಸ ಕನ್ನಡ – ಇಂಗ್ಲಿಶ್ ಪುಸ್ತಕಗಳ) ನಡೆಸುತ್ತಿದ್ದಾರೆ. ಸ್ವತಃ ಪುಸ್ತಕ ಸಂಗ್ರಹಕಾರರೂ ಆಗಿರುವ ಲೇಖಕರು ಪ್ರಾಚೀನ ಪುಸ್ತಕ ಸಂಗ್ರಹದ ನಡುವೆ ಬಹುತೇಕ ಸಮಯ ಕಳೆಯುತ್ತಾರೆ. ಹಲವು ಕನ್ನಡ ಪತ್ರಿಕೆಗಳಿಗೆ ಕನ್ನಡ ಸಿನೆಮಾಗಳನ್ನು ವಿಮರ್ಶಿಸುವ ಲೇಖಕರು ಸದ್ಯಕ್ಕೆ ನ್ಯಾಯಪಥ ಮತ್ತು ನಾನುಗೌರಿ.ಕಾಮ್ ನ ಕಾರ್ಯನಿರ್ವಾಹಕ ಸಂಪಾದಕರಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.

Like
Comment
Loading comments