ಮನ ವಿಭ್ರಾಂತ: ಒಂದು ಕಥೆ

Forgot password?

Delete Comment

Are you sure you want to delete this comment?

ಮನ ವಿಭ್ರಾಂತ: ಒಂದು ಕಥೆ

ಮನ ವಿಭ್ರಾಂತ: ಒಂದು ಕಥೆ

ವಿಶಾಲ್ ತನ್ನ ಸ್ಟುಡಿಯೋದ ಕಿಟಕಿಯಿಂದ ಪ್ರತಿದಿನವೂ ಒಂದು ಹೆಂಗಸನ್ನು ನೋಡುತ್ತಿದ್ದ. ತಾನು ಸಂಗೀತ ಸಂಯೋಜಿಸುವ ಸಮಯದಲ್ಲಿ ಆಕೆಯಿಂದ ತುಂಬ ವಿಚಲಿತನಾಗುತ್ತಿದ್ದ. ಅವಳು ಸರಿಯಾಗಿ ಬೆಳಗಿನ ಹನ್ನೊಂದಕ್ಕೆ ಬಾಲ್ಕನಿಯ ಹೊರಗೆ ಬಂದು ಮಗ್ ಹಿಡಿದು ಕಾಫಿಯೋ ಅಥವ ಟೀಯನ್ನು ಕುಡಿಯುತ್ತಾ ಒಂದು ಸಿಗರೇಟನ್ನು ಸೇದಿ ರಸ್ತೆಯಲ್ಲಿ ಹೋಗುತ್ತಿದ್ದವರನ್ನು ಗಮನಿಸಿ ಮತ್ತೆ ಒಳಗೆ ಹೋಗುತ್ತಿದ್ದಳು. ವಿಶಾಲನಿಗೆ ಇದನ್ನು ಪ್ರತಿ ದಿನವೂ ನೋಡಿ ಒಂದು ರೀತಿಯ ದಿನಚರಿಯಾಗಿ ಹೋಗಿತ್ತು. ಕೆಲವು ಬಾರಿ ಮಿತಿಮೀರಿ ವಿಚಲಿತನಾದಾಗ ವಿಶಾಲ್ ತನ್ನ ಕಿಟಕಿಯ ಪರದೆಯನ್ನು ಇಷ್ಟವಿಲ್ಲದಿದ್ದರೂ ಎಳೆಯುತ್ತಿದ್ದ. ಕೆಲವೊಂದು ಸತಿ ಅವನಿಗೆ ತಾನು ಹಾಗು ಆ ಹೆಂಗಸು `ಇನ್ದ ಮೂಡ್ ಫಾರ ಲವ್' ಸಿನಿಮಾದ ದೃಶ್ಯದ ಭಾಗವಾಗಿರಬಹುದು ಎಂದೂ ಅನಿಸಿದ್ದಿದೆ. ಅವನ ಇತ್ತೀಚಿನ ಸಿನಿಮಾದ ಹಾಡೊಂದು ಬಹಳ ಜನಪ್ರಿಯವಾಗಿತ್ತು. ಎಷ್ಟೆಂದರೆ ಶಾಸ್ತ್ರೀಯ ಸಂಗೀತ ಲೋಕದ ಎಲ್ಲರೂ ಸಂಪ್ರದಾಯವನ್ನು ಮುರಿದು ಒಂದು ಸಿನಿಮಾ ಹಾಡನ್ನು ಹೊಗಳಿದರು. ಹಾಗೆ ಅವರಿಂದ ಪ್ರಶಂಸೆ ಬರುವುದು ಬಹಳ ವಿರಳ. ದಿನಪತ್ರಿಕೆಯ ಸಂದರ್ಶನ ನೀಡುವಾಗ ಸಂದರ್ಶಕಿ "ಎಲ್ಲಿಂದ ಬಂದಳು ಇವಳು..." ಎಂಬ ಹಾಡಿನ ಸ್ಪೂರ್ತಿಯ ಬಗೆಗೆ ಕೇಳಿದಾಗ ವಿಶಾಲ್ ತಾನು ಪ್ರತಿದಿನ ನೋಡುತ್ತಿದ್ದ ಹೆಂಗಸಿನ ಬಗೆಗೆ ಹೇಳುತ್ತಾನೆ. ಬಹಳ ಮಂದಿ ವಿಶ್ಲೇಷಕರುವಿಶಾಲ ದಿನನಿತ್ಯದ ಜೀವನದಿಂದ ಪಡೆಯುವ ಸ್ಪೂರ್ತಿಯನ್ನು ಹೊಗಳುತ್ತಾರೆ. ಮರುದಿನದ ಪತ್ರಿಕೆಯನ್ನು ಹಿಡಿದು ವಿಶಾಲ್ ತನ್ನ ಬಾಲ್ಕನಿಗೆ ಬಂದು ಆ ಹೆಂಗಸು ಬರುವುದನ್ನು ಕಾತುರದಿಂದ ಕಾಯುತ್ತಿರುತ್ತಾನೆ. ಹನ್ನೆರಡಾದರೂ ಆಕೆ ಬರುವುದಿಲ್ಲ. ವಿಶಾಲ್್ಆಗಾಗ್ಗೆ ಬಂದು ನೋಡುತ್ತಾನೆ ಆದರೆ ಅವಳು ಬರುವ ಸುಳಿವಿಲ್ಲ. ವಿಶಾಲನಿಗೆ ಗೊಂದಲವುಂಟಾಗುತ್ತದೆ. ಗಲಿಬಿಲಿಗೊಳ್ಳುತ್ತಾನೆ - "ಆಕೆಯೇನಾದರೂ ತನ್ನ ಸಂದರ್ಶನವನ್ನು ಓದಿಸಿಟ್ಟುಗೊಂಡಿದ್ದಾಳ?" "ಇಲ್ಲ ಸಾಧ್ಯವಿಲ್ಲ. ತಾನು ಆಕೆಯನ್ನು ಪ್ರತಿದಿನ ನೋಡುತ್ತಿದ್ದೇನೆಂದು ಆಕೆಗೆ ಗೊತ್ತಾಗಲಾದರೂ ಹೇಗೆ ಸಾಧ್ಯ?" "ಇನ್ನೊಬ್ಬರ ಬಗೆಗೆ ಅವರ ಅನುಮತಿಯಿಲ್ಲದೇ ಹೇಳಿಕೆ ಕೊಟ್ಟದ್ದು ತಪ್ಪಾಯಿತಾ?" ಹೀಗೇ ಹಲವು ಬಗೆಯ ಯೋಚನೆಗಳು ಅವನ ತಲೆಯಲ್ಲಿ ಸುಳಿಯುತ್ತದೆ. ಮಧ್ಯಾಹ್ನವಾದರೂ ಆಕೆ ತನ್ನ ಬಾಲ್ಕನಿಯಲ್ಲಿ ಕಾಣುವುದಿಲ್ಲ. ಕಿಟಕಿಯ ಪರದೆ ಒಂದು ಕ್ಷಣಕ್ಕೂಎಳೆಯದೇ ಎದುರಿನ ಅವಳ ಬಾಲ್ಕನಿಯ ಕಡೆಗೇನೋಡುತ್ತಿದ್ದ. ವಿಶಾಲನ ಸ್ಟುಡಿಯೋದ ಸಹಾಯಕ ಸುಧಾಕರ ಬಂದು ತಾನು ಹೊರಡುವುದಾಗಿಹೇಳುತ್ತಾನೆ. ಆಗಲೇ ಅವನಿಗೆ ಅದಾಗಲೇ ರಾತ್ರಿಯಾಗಿದೆ ಎಂದು ಅರಿವಾಗುವುದು. ಸುಧಾಕರನಿಗೆ ಹೊರಡಲು ಹೇಳಿ ತಾನು ಅಲ್ಲೇ ಇರುತ್ತಾನೆ.

ವಿಶಾಲ್ ತನ್ನ ಗೆಳೆಯ ಅಭಿಷೇಕ್‍ಗೆ ಕರೆ ಮಾಡಿ ಸಾಧ್ಯವಾದರೆ ಬರಲು ಹೇಳುತ್ತಾನೆ. ಅಭಿ ತಡರಾತ್ರಿಯಾದರೂ ಬರುತ್ತಾನೆ. ವಿಶಾಲ್ ಆತನಿಗೆ ಎಲ್ಲವನ್ನೂ ವಿವರಿಸುತ್ತಾನೆ. "ಹಿಂದೆ ಮಿಥಿಲಾಳ ಬಗೆಗೂ ಇದೇ ತರಹ ಪತ್ರಿಕೆಯಲ್ಲಿ ಹೇಳಿಕೆ ಕೊಟ್ಟಿದ್ದೆ ನೀನು. ನೆನಪಿದ್ಯಾ?" ಅಭಿ ಒಂದು ಗ್ಲಾಸಿನಲ್ಲಿ ವಿಸ್ಕಿ ಹಾಕುತ್ತಾ ವಿಶಾಲ್‍ಗೆ ಕೇಳುತ್ತಾನೆ. ಸಂದರ್ಶನ ಕೊಡ ಬೇಕಾದರೆ ಆ ರೀತಿಯ ತಪ್ಪುಗಳು ಆಗೋದು ಸಹಜ. ಅದೆಲ್ಲ ಯಾಕೀಗ?” ಎಂದು ವಿಶಾಲ್ ಎದುರಿನ ಬಾಲ್ಕನಿಯನ್ನು ನೋಡುತ್ತ ಹೇಳುತ್ತಾನೆ.

ಒಂದು ಹುಸಿನಗುವಿನ ಬಳಿಕ ಅಭಿ - “ಸಾಮಾನ್ಯ? ವಿಶು… ನೀನು ಮರೆತಿರಬಹುದು, ನೆನಪಿಸುತ್ತೇನಿ ಕೇಳು. ಮಿಥಿಲಾ ಅಂದು ಅವಳ ಕೈಲಿದ್ದ ಮೂರು ಸಿನಿಮಾಗಳನ್ನು ಕಳೆದುಕೊಂಡಳು, just because you chose to reveal about your relationship!”

“Because of me! ತಲೆಕೆಟ್ಟಿದೆಯ ನಿನಗೆ?" ಎಂದು ವಿಶಾಲ್ ರೇಗುತ್ತಾನೆ.

“ಖಂಡಿತ ಇಲ್ಲ. ಯಾಕೆ ಹೇಗೆ ಏನು ಅಂತ ಏನೇನು ಕೇಳದೇ ರೇಗಿಬಿಡ್ತಿಯ. ಬಿಡು.” ಇಬ್ಬರ ನಡುವೆಯೂ ಬಿಮ್ಮೆನ್ನುವ ಮೌನ. ಅಭಿ ಮುಂದುವರೆಸುತ್ತಾ “ವಿಶು, ನಿರ್ಮಾಪಕರ ಮನಸ್ಥಿತಿ ಬೇರೆ ಇರ್ತದೋ ಮಾರಾಯ. ನೀನು ನಿನ್ನ ಸಂಗೀತಕ್ಕಿಂತಲೂ ನಿನ್ನ ಸಿಟ್ಟಿಗೆ ಹೆಸರಾಗಿರುವ ಪೈಕಿ. ಇನ್ನು ಮಿಥಿಲಾಳನ್ನು ತೆಗೆದುಕೊಂಡರೆ ನಿನ್ನ ಸಿಟ್ಟನ್ನು ಎಲ್ಲಿ ಎದುರಿಸ ಬೇಕಾಗುವುದೋ ಎಂಬ ಅಳುಕಿನಿಂದ ಎಲ್ಲರೂ ಹಿಂದೆ ಸರಿದರು. ಇವೆಲ್ಲದರ ಮೇಲೆ ನೀವಿಬ್ಬರು ಜೊತೆಯಾಗೂ ಮುಂದೆ ಸಾಗಲಿಲ್ಲ. ಬೇರೆಯಾದಿರಿ.” ವಿಶಾಲ್ ದೀರ್ಘವಾದ ನಿಟ್ಟುಸಿರು ಬಿಟ್ಟು ತನ್ನ ಕೈಗಳಿಂದ ತನ್ನ ಮುಖ ಮುಚ್ಚಿಕೊಳ್ಳುತ್ತಾನೆ. ಅಭಿ ವಿಶಾಲನನ್ನು ನೋಡುತ್ತ ಸುಮ್ಮನೆ ನಿಂತು ಬಿಡುತ್ತಾನೆ.

“ಎಷ್ಟು ವಿಚಿತ್ರ ಅಲ್ವಾ? ನೀನು ಎಷ್ಟು ಜನರ ಜತೆಗೆ ಓಡಾಡಿದರೂ ನಿನಗೆ ಮಾತ್ರ ಸಿಗುವ ಕೆಲಸದಲ್ಲಿ ಯಾವ ಏರುಪೇರೂ ಆಗಲಿಲ್ಲ. ಆದರೆ ನಿನ್ನ ಜತೆಗೆ ಗುರುತಿಸಿಕೊಂಡ ಹೆಣ್ಣುಮಕ್ಕಳು ಮಾತ್ರ isolate ಆಗ್ತಾರಲ್ಲ. ಹೇಗೆ!" ಎಂದು ಹೇಳಿ ಅಭಿ ಸೋಫಾಗೆ ಒರಗಿ ಕೂರುತ್ತಾನೆ. ವಿಶಾಲನೂ ಎದುರಿಗೆ ಕೂರುತ್ತಾನೆ. ಇಬ್ಬರೂ ತಮ್ಮೆದುರಿಗೇನಿದೆಯೋ ಅದನ್ನು ಅನ್ಯಮನಸ್ಕರಾಗಿ ನೋಡುತ್ತಿದ್ದಾರೆ.

“ನಿನಗೆ ಯಾವತ್ತೂ ಅನಿಸಲಿಲ್ವ ಮಿಥಿಲಾ ವಿಷಯದಲ್ಲಿ ನೀನು ಮಾಡಿದ್ದು ತಪ್ಪುಅಂತ?” ಎಂದು ಅಭಿ ಕೇಳಿಮುಗಿಸುವ ಹೊತ್ತಿಗೇ ವಿಶಾಲ್ ಎದ್ದು ಬಂದು ಅಭಿಯ ಪಕ್ಕದಲ್ಲಿ ಕುಳಿತು ಅವನ ಭುಜದ ಮೇಲೆ ಕೈಯ್ಯಿಟ್ಟು - “ಅಭಿ,ಿPlease! ನಿನಗೆ ಕೈ ಜೋಡಿಸಿ ಕೇಳುತ್ತೇನೆ, ನಿನ್ನನ್ನು ನಾನು ಕರೆದಿರುವುದು ನನ್ನ ಮನಸ್ಸು ಹಗುರಾಗಲಿ ಅಂತ. ನನ್ನ ಬಗ್ಗೆ ನನಗೇ ಅಸಹ್ಯ ಹುಟ್ಟಿಸು ಅಂತಲ್ಲ. ದಯವಿಟ್ಟು”. "ಸಧ್ಯ ನಿನಗೆ ಅಸಹ್ಯ ಅಂತಾದರೂ ಅನಿಸುತ್ತದೆಂದು ಕೇಳಿ ಖುಷಿಯಾಯಿತು.” ಎಂದು ಅಭಿ ಹೇಳಿದ ನಂತರ ವಿಶಾಲ್ ಎದ್ದುಹೋಗಿ ತನ್ನ ಪಿಯಾನೋ ಮುಂದೆ ಕುಳಿತುಕೊಳ್ಳುತ್ತಾನೆ.

ಇದ್ದಕ್ಕಿದ್ದ ಹಾಗೆ ಕೋಣೆಯು ಮೌನ ತಾಳುತ್ತದೆ. “ನೀನು ಅವಳನ್ನು ಬಿಟ್ಟ ದಿನವೇ ಹೋಗಿ ಮಿಥಿಲಾಳ ಕೈ ಹಿಡಿದು ಸುಮ್ಮನೆ ಏನೂ ಮತನಾಡದೇ ಕೂರಬೇಕು ಎಂದೆನಿಸಿತ್ತು. ಆದರೆ ಅವಳ ದುಃಖವನ್ನು ಬಯಸಿದ್ದೆ ಎಂದೆನಿಸಬಾರದು ನೋಡು. ಅದಕ್ಕೇ ಸುಮ್ಮನಾದೆ. ಕಾದೆ ಕಾದೆ ಕಾದೆ… ಕಾಯುತ್ತಲೇ ಬಂದೆ. ನಾಲ್ಕು ವರ್ಷ ವಿಶಾಲ್, ನಾಲ್ಕು! ನಾಲ್ಕು ವರ್ಷ ಕಾದು ಈಗ ಆರು ತಿಂಗಳಿನಿಂದ ಇಬ್ಬರು ಮದುವೆಯಾಗಿ ಜತೆಯಾಗಿದ್ದೇವೆ. ನೀನು ನೋಡಿದರೆ ನಿನ್ನ ರಮ್ಯ ಲೋಕದಲ್ಲೇ ವಿಹರಿಸುತ್ತಿದ್ದೀ. ಹೋಗಲಿ ಬಿಡು. I won’t bring this up again.” ಎಂದು ಹೇಳಿದ ಅಭಿಯ ಮುಖದಲ್ಲಿ ಮೂಡಿದ ಸೌಮ್ಯವಾದ ನಗುವು ವಿಶಾಲನನ್ನು ಇರಿದ ಹಾಗೆನಿಸಿದರೂ ಅವನು ಅದರಿಂದ ವಿಚಲಿತನಾಗದಿರಲು ಪ್ರಯತ್ನಿಸುತ್ತಾನೆ. ಅವನಿಗೆ ಏನು ಹೇಳಬೇಕು ಅನ್ನೋದು ತಿಳಿಯದೇ ರಸ್ತೆಯಲ್ಲಿ ಏಕಾಂಗಿಯಾಗಿ ನಡೆದು ಹೋಗುತ್ತಿರುವ ಒಂದು ಜೋಡಿಯನ್ನು ನೋಡುತ್ತಾನೆ. ಆ ಜೋಡಿ ರಸ್ತೆಯ ತುದಿಯಲ್ಲಿ ಮರೆಯಾದ ತಕ್ಷಣ ಅಭಿಯ ಮೊಬೈಲ್ ರಿಂಗ್ಆಗುತ್ತದೆ. ಕರೆ ಮಾಡುತ್ತಿರೋದು ಮಿಥಿಲಾ. ಅಭಿ ಹಾಗು ವಿಶಾಲ್ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಾರೆ. ಬಹುಶಃ ಇಬ್ಬರಲ್ಲಿ ಕರೆ ಯಾರಿಗೆ ಎಂಬ ಗೊಂದಲ ಇಬ್ಬರಿಗೂ ಬಂದಿದ್ದಿರಬಹುದು. ಅಭಿ ಫೋನ್ ಹಿಡಿದು ಒಳಗೆ ಹೋಗುತ್ತಾನೆ. ವಿಶಾಲ್ ಬಾಲ್ಕನಿ ಕಡೆಗೆ ನೋಡುತ್ತಾನೆ. ಸಮಯ ಆಗಲೇ 11.45 ಆಗಿದೆ.

ಒಳಗೆ ಬಂದು ವಿಶಾಲ್ ಟ್ಯಾಕ್ಸಿ ಡ್ರೈವರ್ ಸಿನಿಮಾದ ಸಂಗೀತ ಚಾಲೂ ಮಾಡ್ತಾನೆ. ಕರೆಮುಗಿಸಿದ ನಂತರ ಅಭಿ ಹಾಗು ವಿಶಾಲ್ ಸುಮ್ಮನೆ ಕೂರುತ್ತಾರೆ. "ನಿನಗೇನನಿಸುತ್ತೆ? ಅವಳು ನನ್ನ ಸಂದರ್ಶನ ಓದಿ ಸಿಟ್ಟು ಮಾಡಿಕೊಂಡಿರಬಹುದಾ?" "ನೀನು ಮ್ಯೂಸಿಕ ಡಿರೆಕ್ಟರ್ ಅಂತ ಅವಳಿಗೆ ಗೊತ್ತ?" "ಇಲ್ಲ. ಅವಳಿಗೇನು. ಇಡೀ ಲೊಕಾಲಿಟಿಯಲ್ಲಿ ಯಾರಿಗೂ ಗೊತ್ತಿಲ್ಲ." ಎಂದು ವಿಶಾಲ್ ಹೇಳುತ್ತಾನೆ. "ಮತ್ತೆ? ನೀನ್ಯಾರು ಅಂತನೇ ಅವಳಿಗೆ ಗೊತ್ತಿಲ್ಲದೇ ಪೇಪರ್‍ನಲ್ಲಿ ಬಂದಿರೋದು ನಿನ್ನದೇ ಸಂದರ್ಶನ ಅಂತ ಅವಳಿಗೆ ಹೇಗೆ ಗೊತ್ತಾಗುತ್ತೆ ಹೇಳು? ಗೊತ್ತಾದರೂ ನೀನು ಅವಳ ಬಗ್ಗೆ ಮಾತಾಡ್ತಿದಿಯಾ ಅಂತ ಹೇಗೆ ಗೊತ್ತಾಗುತ್ತೆ? ಅವಳ ಹಾಗೆ ಸಾವಿರ ಹೆಂಗಸರು ಈ ಊರಲ್ಲಿ ಬಾಲ್ಕನಿಗೆ ಬಂದು ಕಾಫೀ ಕುಡೀತಾರೆ ಸಿಗರೇಟು ಸೇದ್ತಾರೆ. ಹಾಗೆಲ್ಲಾ ಏನಿರಲ್ಲಾ. ಡೋಂಟ್ ವರಿ." ಅಂತ ತನ್ನದೇ ಥಿಯರಿಯನ್ನಅಭಿ ಹೇಳುತ್ತಾನೆ. ವಿಶಾಲ್‍ಗೆ ಒಂದು ಕ್ಷಣ ಅದು ಸತ್ಯ ಅನಿಸಿದರೂ ಸ್ವಲ್ಪ ಅನುಮಾನ ಇದ್ದೇ ಇದೆ. ಅಭಿ ಇದರ ಜತೆಗೆ ಇನ್ನೊಂದು ಮಾತು ಸೇರಿಸುತ್ತಾನೆ - "ನೀನು ಮಾತ್ರ ಯಾವ ಪತ್ರಿಕೆಯಲ್ಲೂ ನಿನ್ನ ಫೋಟೋ ಬರದ ಹಾಗೆ ನೋಡ್ಕೊತಿಯ ಆದರೆ ಬೇರೆಯವರ ಮಾಹಿತಿಯನ್ನೆಲ್ಲಾ ಸಲೀಸಾಗಿ ಹೇಳ್ತಿಯಲ್ಲಾ. ಇದು ಹೇಗೆ ಸಾಧ್ಯ?" ಎಂದು ಕೇಳುತ್ತಾನೆ. ವಿಶಾಲ್ ಅಭಿಯನ್ನು ದಿಟ್ಟಿಸಿ ನೋಡುತ್ತಾನೆ. ಅಭಿ ಕೂಡ ವಿಶಾಲ್‍ನನ್ನೇ ದಿಟ್ಟಿಸುತ್ತಾನೆ. ಒಂದು ಕ್ಷಣ ಇಬ್ಬರಿಗೂ ಯಾರು ಸರಿ ಎಂಬ ಗೊಂದಲ ಮೂಡಿದ್ದಿರಬಹುದು. ಯಾಕೆಂದರೆ ಇಬ್ಬರೂ ಕಣ್ಣು ತಪ್ಪಿಸುವುದಿಲ್ಲ. ಗಾಳಿಯಲ್ಲಿ ಅಸಹಜ ಉಸಿರು ಆಡುತ್ತಿದ್ದಾಗಲೇ "ನಾಳೆ ಅವಳ ಮನೆಗೆ ಹೋಗಿಬರ್ಲಾ?" ಅಂತ ವಿಶಾಲ್ ಕೇಳುತ್ತಾನೆ. "ನನಗೆ ಕುಡಿದಿರೋದೆಲ್ಲಾ ಇಳಿಸಬೇಡ. ನಿನ್ನಷ್ಟು ರೊಮ್ಯಾಂಟಿಕ್ ಆಗಿ ಪ್ರಪಂಚ ಇಲ್ಲ. ಸ್ವಲ್ಪ ರಿಯಾಲಿಟಿನಲ್ಲೂ ಜೀವಿಸು. ಅವಳ್ಯಾರೋ ಏನೋ. ನಿನಗ್ಯಾಕೆ ಇಲ್ಲದ ಉಸಾಬರಿ. ಜನರನ್ನ ಹೇಗಿದಾರೋ ಹಾಗೇ ನೋಡು. ನಿನ್ನ ಜೀವನದ ಮುಖಾಂತರವಾಗೇ ಎಲ್ಲರೂ ಹೋಗಬೇಕಾಗಿಲ್ಲ." ಅಂತ ರೇಗಾಡುತ್ತಾನೆ. ಅಭಿಗೆ ಮತ್ತೆ ಮತ್ತೆ ಮಿಥಿಲಾ ಕರೆ ಮಾಡುತ್ತಲೇ ಇದ್ದಾಳೆ. ವಿಶಾಲ್ ಕಡೆಗೆ ತಾನೇ ಅವನಿಗೆ ಹೊರಡಲು ಹೇಳುತ್ತಾನೆ. ಅಭಿ ಹೊರಟ ನಂತರ ಮತ್ತೆ ಬಾಲ್ಕನಿಯಲ್ಲಿ ನಿಲ್ಲುತ್ತಾನೆ. ಕೆಳಗೆ ಅಭಿ ಕಾರಿನ ಒಳಗೆ ಹತ್ತುವುದನ್ನು ನೋಡುತ್ತಾನೆ. ಅಭಿ ಕಾರು ಹತ್ತುವುದಕ್ಕೂ ಎದುರು ಇರುವ ಅವಳ ಮನೆಯದೀಪ ಹತ್ತುವುದಕ್ಕೂ ಸರಿಯಾಗುತ್ತದೆ. ವಿಶಾಲ್‍ನ ಕಣ್ಣಲ್ಲಿ ಒಂದು ಹೊಳಪು ಮೂಡುತ್ತದೆ. ತನ್ನ ಮೈಯ್ಯಲ್ಲಿರುವ ನರಗಳನ್ನು ಯಾರೋ ಗಿಟಾರ ಮಾಡಿಕೊಂಡು ನುಡಿಸಿದ ಅನುಭವವಾಗುತ್ತದೆ ವಿಶಾಲನಿಗೆ. ಏನು ಮಾಡುವುದೆಂದು ತಿಳಿಯದೇ ತಕ್ಷಣ ಅಭಿಗೆ ಕರೆ ಮಾಡುತ್ತಾನೆ - "ಅಭಿ... ಅಭಿ... ಅಲ್ಲೇ ಇರು. ಸ್ವಲ್ಪ ಕೆಳಗೆ ಬರ್ತಿದೀನಿ. ಪ್ಲೀಸ್." ಎಂದು ಏದುಸಿರು ಬಿಟ್ಟು ಹೇಳುತ್ತಾನೆ. ಕೆಳಗಿನಿಂದ ಕಾರು ಇಳಿದು ಅಭಿ ಏನಾಯಿತು ಎಂದು ಸನ್ನೆ ಮಾಡುತ್ತಾನೆ. ವಿಶಾಲ್ ಚಪ್ಪಲಿಯೂ ಮೆಟ್ಟದೇ ಕೆಳಗೆ ಬರುತ್ತಾನೆ. "ನೋಡು. ಅದೇ ಮನೆ. ಅವಳು ಲೈಟ್ ಹಾಕಿದ್ಲು ಈಗ." ಎಂದು ಅಭಿಯ ಹೆಗಲ ಮೇಲೆ ಕೈ ಊರಿ ಏದುಸಿರು ಬಿಡುತ್ತಾ ಹೇಳುತ್ತಾನೆ. ಅಭಿ ತನ್ನ ಕಾರಿನಿಂದ ಒಂದು ಬಾಟಲ್ ನೀರು ತೆಗೆದು ವಿಶಾಲನಿಗೆ ಕೊಡುತ್ತಾನೆ. ಅವಳ ಬಾಲ್ಕನಿಯ ಕಡೆಗೆ ನೋಡುತ್ತಾ ಅಭಿ ಹೇಳುತ್ತಾನೆ - "ಏಯ್... ನಿನಗೇನಾದರೂತಲೆ ಇದಿಯಾ? ಗಾಬರಿ ಆಗಿಹೋಗಿತ್ತು. ಏನಾಯ್ತಪ್ಪ ಅಂತ." ನೀರು ಕುಡಿದು ಸುಧಾರಿಸಿಕೊಂಡು ವಿಶಾಲ್ - "ನನಗೆ ಅವಳ ಮನೆಗೆ ಹೋಗಬೇಕು. ಈಗಲೇ." ಅಂತ ಹೇಳುತ್ತಾನೆ. ಮಿಥಿಲಾಳ ಕರೆ ಮತ್ತೊಮ್ಮೆ ಬರುತ್ತದೆ. ಅಭಿ ರಿಸೀವ್ ಮಾಡಿ - "ಸ್ವಲ್ಪ ವೇಯ್ಟ್ ಮಾಡು. ಬರ್ತಿದೀನಿ ಅಂತ ಹೇಳ್ದೆ ತಾನೇ?" ಅಂತ ಸ್ವಲ್ಪ ರೇಜಿಗೆ ಪಟ್ಟುಕೊಂಡು ಹೇಳುತ್ತಾನೆ. ಅಭಿ ಸ್ವಲ್ಪ ದೂರ ಹೋಗಿ ಮಾತಾಡಿ ಬರುತ್ತಾನೆ. ವಿಶಾಲ್ ಮೇಲೆಯೇ ನೋಡುತ್ತಿದ್ದಾನೆ. "ನಿನ್ನ ಜತೆಗಿದ್ದೀನಿ ಅಂತ ಇರುಸು ಮುರುಸು ಅವಳಿಗೆ." ಅಂತ ತಿರುಗಿ ಬಂದು ಹೇಳುತ್ತಾನೆ. "ದಯವಿಟ್ಟು ಮನೆಗೆ ವಾಪಸ್ ಹೋಗು. ಈ ತರಹದ ಹುಚ್ಚಾಟಗಳೆಲ್ಲಾ ನಿಲ್ಲಿಸು. ಇದರ ಮೇಲೆ ನಿನ್ನಿಷ್ಟ" ಎಂದು ಹೇಳಿ ಅಭಿ ಹೊರಡುತ್ತಾನೆ. ವಿಶಾಲ್ ಮೇಲಿನ ಬಾಲ್ಕನಿಯಲ್ಲಿ ಉರಿಯುತ್ತಿರುವ ದೀಪವನ್ನು ನೋಡುತ್ತಲೇ ಇದ್ದಾನೆ. ಏನು ಮಾಡಬೇಕೆಂದು ತಿಳಿಯದೇ ಅಲ್ಲೇ ಫುಟ್‍ಪಾತಿನ ಕಲ್ಲುಬೆಂಚಿನ ಮೇಲೆ ಕೂರುತ್ತಾನೆ. ಇನ್ನೇನು ತಿರುಗಿ ಮನೆಗೆ ಹೋಗಬೇಕೆಂದು ಅಂದು ಕೊಂಡಾಗ ಅವಳು ಬಾಲ್ಕನಿಗೆ ಬಂದು ನಿಲ್ಲುತ್ತಾಳೆ. ವಿಶಾಲನ ಎದೆ ಬಡಿತ ಜೋರಾಗುತ್ತದೆ. ಅವಳು ಹೊರಬಂದು ಸ್ವಲ್ಪ ಹೊತ್ತು ನಿಂತು ಆಚೀಚೆ ನೋಡುತ್ತಾಳೆ. ವಿಶಾಲ್ ಚಿತ್ರಕಾರನೊಬ್ಬ ತನ್ನ ಅಪೂರ್ಣ ಕಲಾಕೃತಿಯನ್ನು ನೋಡುವ ಹಾಗೆ ಅವಳನ್ನು ನೋಡುತ್ತಾನೆ. ಅವಳೂ ಸಹ ಕೆಳಗೆ ನೋಡುತ್ತಾಳೆ. ಅಷ್ಟು ಮೇಲಿನಿಂದ ಅವಳಿಗೆ ತಾನು ಹೇಗೆ ಕಾಣುತ್ತಿರಬಹುದೆಂದು ಊಹಿಸಿ ನೋಟ ಬದಲಿಸುತ್ತಾನೆ. ತನ್ನನ್ನು ನೋಡುತ್ತಿದ್ದಾಳೋ ಇಲ್ಲವೋ ಎಂಬ ಕುತೂಹಲ ತಡೆಯಲಾಗದೇ ಮೇಲೆ ನೋಡುತ್ತಾನೆ. ಅವಳು ಒಂದು ಸಿಗರೇಟನ್ನು ಹಚ್ಚುತ್ತಾಳೆ. ಒಂದೆರಡು ಬಾರಿ ಸಿಗರೇಟು ಎಳೆದು ಕೆಳಗೆ ನೋಡಿ ಮತ್ತೆ ಮರೆಯಾಗುತ್ತಾಳೆ. ಅವಳು ತನ್ನನ್ನೇ ನೋಡಲು ಬಂದಿದ್ದಳಾ ಎಂಬ ಶಂಕೆ ವಿಶಾಲನಿಗೆ ಕಾಡಲು ಹತ್ತುತ್ತದೆ. ಮರೆಯಾದ ಮೇಲೂ ಅವಳು ಬಿಟ್ಟಹೊಗೆ ಗಾಳಿಯಲ್ಲಿರುತ್ತದೆ. ವಿಶಾಲನಿಗೆ ಸಿಗರೇಟಿನ ವಾಸನೆ ಬರುತ್ತದೆ. ತಿರುಗಿ ಮನೆಗೆ ಬರುತ್ತಾನೆ.

ವಿಶಾಲ್ ತನ್ನ ಮನೆಗೆ ಬಂದು ಪುನಃ ಬಾಲ್ಕನಿಗೆ ಹೋಗಿ ನಿಲ್ಲುತ್ತಾನೆ. ಕೆಳಗೆ ನೋಡಿದರೆ ತಾನು ನಿಂತ ಹಾಗೆಯೇ ಒಬ್ಬ ನಿಂತಿದ್ದಾನೆ. ತುಂಬ ಅಸಹಾಯಕನಾಗಿ ಕಾಣುತ್ತಿದ್ದಾನೆ ಇವನ ಕಣ್ಣಿಗೆ. "ನಾನೂ ಅವಳ ಕಣ್ಣಿಗೆ ಹೀಗೇ ಕಂಡಿರಬಹುದ" ಎಂದು ಮನಸಲ್ಲೇ ಅಂದುಕೊಂಡು ತನ್ನ ಬಗೆಗೆ ತಾನೇ ಮರುಕ ಪಡುತ್ತಾನೆ. ಎದುರಿನ ಬಾಲ್ಕನಿ ಖಾಲಿಯಾಗಿದೆ ದೀಪವೂ ಆರಿದೆ. ಇಷ್ಟು ಹೊತ್ತು ಅವಳು ಬರಲಿಲ್ಲ ಅನ್ನುವುದು ಕಾಡಿದರೆ ಈಗ ತಾನು ಆಕೆಗೆ ಹೇಗೆ ಕಂಡಿರಬಹುದು ಎಂಬ ಯೋಚನೆ ವಿಶಾಲನಿಗೆ ಕಾಡುತ್ತದೆ. ತಾನೂ ಒಂದು ಸಿಗರೇಟನ್ನು ಹಚ್ಚುತ್ತಾನೆ. ಒಂದೆರಡು ಬಾರಿ ಹೊಗೆ ಬಿಟ್ಟ ನಂತರ ಈ ಸಿಗರೇಟಿನ ವಾಸನೆಗೂ ಕೆಳಗೆ ಬಂದ ಸಿಗರೇಟಿನ ವಾಸನೆಗೂ ಅಜಗಜಾಂತರ ವ್ಯತ್ಯಾಸ ಇದೆ ಅನ್ನುವ ಭಾಸ ಅವನಿಗೆ. ಇನ್ನು ಇದರ ಬಗೆಗೆ ಜಾಸ್ತಿ ಯೋಚಿಸುವುದು ಬೇಡವೆಂದೆನಿಸಿ ಮನೆಗೆ ಹೋಗಲು ನಿರ್ಧರಿಸಿ ಹೊರಡಲು ಅನುವಾಗುತ್ತಾನೆ. ಎಲ್ಲಾ ದೀಪಗಳನ್ನು ಆರಿಸುತ್ತಾನೆ ಆದರೆ ಬಾಲ್ಕನಿಯ ಹಿಂದಿನ ದೀಪ ಒಮ್ಮೆ ಆರಿಸಿ ಮತ್ತೆ ಹೊತ್ತಿಸುತ್ತಾನೆ. ಪರದೆ ತೆಗೆದೇ ಹೊರಡುತ್ತಾನೆ. ಕೆಳಗೆ ಕಾರು ತೆಗೆದ ಮೇಲೂ ಒಮ್ಮೆ ಅವಳ ಬಾಲ್ಕನಿ ಕಡೆ ನೋಡಿ ಮುಂದೆ ಹೋಗುತ್ತಾನೆ. ಗೇಟಿನಿಂದ ಹೊರಗೆ ಬಂದ ಹಾಗೆಯೇ ಎದುರಿನಿಂದ ಒಂದು ದೊಡ್ಡ ಕಾರು ಬರುವುದನ್ನು ನೋಡುತ್ತಾನೆ. ಆ ಕಾರು ಅವಳ ಬಿಲ್ಢಿಂಗ್ ಒಳಗೆ ಹೋಗುವುದನ್ನು ನೋಡುತ್ತಾನೆ. ಮನದಲ್ಲಿ ಗಾಬರಿ ಶುರುವಾಗುತ್ತದೆ ಹಾಗು ಇನ್ನೊಂದು ಕಡೆ ಬಿಲ್ಡಿಂಗ್‍ನ ಒಳಗೆ ಅಷ್ಟೊಂದು ಮನೆಯಿದೆ. ಯಾವ ಮನೆಗಾದರೂ ಆ ಕಾರಿನವನು ಬಂದಿರಬಹುದು ಎಂದು ಸಮಾಧಾನ ಪಟ್ಟುಕೊಳ್ಳುತ್ತಾನೆ. ಆದರೂ ಕಸಿವಿಸಿ ಇದ್ದೇ ಇದೆ. ಆ ಹೆಂಗಸು ಆ ಕಾರು ಹತ್ತಿ ಹೋಗುವುದನ್ನು ನೋಡುತ್ತಾನೆ. ಕಾರನ್ನು ಹಿಂಬಾಲಿಸಲು ಶುರುವಿಡುತ್ತಾನೆ. ಸ್ವಲ್ಪ ದೂರ ಹೋದ ಹಾಗೆಯೇ ಕಾರು ರಸ್ತೆ ಬದಿಯಲ್ಲಿ ನಿಲ್ಲುತ್ತದೆ. ಇಬ್ಬರೂ ಕೆಳಗಿಳಿದು ವಾದ ಮಾಡುತ್ತಿರುವ ಹಾಗೆ ವಿಶಾಲ್‍ಗೆ ಕಾಣುತ್ತದೆ. ತಾನು ಇಳಿದು ಹೋಗುವುದೋ ಬೇಡವೋ ಎಂಬ ಗೊಂದಲದಲ್ಲಿದ್ದಾಗಲೇ ಅವನ ಫೋನ್ರಿಂಗಣಿಸುತ್ತದೆ. ಆ ಕಡೆಯಿಂದ ಸೆಕ್ಯೂರಿಟಿ ಗಾರ್ಡ್ ಯಾರೋ ಮಿಥಿಲಾ ಅಂತ ಕೇಳಿಕೊಂಡು ಬಂದಿದ್ದಾರೆ ಎಂದು ಹೇಳುತ್ತಾನೆ. ವಿಶಾಲ್‍ಗೆ ಇಂದಿನ ದಿನವೇ ಒಂದು ಫ್ಯಾಂಟಸಿ ಅನಿಸುತ್ತಿದೆ. ವಿಶಾಲ್‍ಗೆ ಹಳೆಯ ವಿಷಯಗಳೆಲ್ಲವೂ ವಠಾರಕ್ಕೆ ಬಂದ ವಿಳಾಸವಿಲ್ಲದ ಕಾಗದಕ್ಕೆ ಅಂಟಿದ ಜನರ ಹಾಗೆ ತನಗೆ ಅಂಟುತ್ತಿದೆ ಅನಿಸುತ್ತದೆ. ಕಾರು ತಿರುಗಿಸುವಾಗ ಒಮ್ಮೆ ಮತ್ತೆ ವಾದದಲ್ಲಿ ತೊಡಗಿರುವ ಅವರ ಕಡೆಗೆ ನೋಡುತ್ತಾನೆ. ಅವಳು ಒಮ್ಮೆ ಇವನ ಕಣ್ಣಿನಲ್ಲಿ ನೋಡುತ್ತಾಳೆ. ವಿಶಾಲ್‍ಗೆ ಆ ಒಂದೆರಡು ಸೆಕೆಂಡುಗಳಲ್ಲಿ ಅವಳನ್ನು ಮೊದಲನೇ ದಿನದಿಂದ ನೋಡಿದ ಎಲ್ಲ ಕ್ಷಣಗಳೂ ಕಣ್ಮುಂದೆಸಾಗುತ್ತದೆ. ಇಂತಹ ಅಪರಾತ್ರಿಯಲ್ಲಿ ಮಿಥಿಲಾ ಯಾಕೆ ಬಂದಿದ್ದಾಳೆಂಬುದು ತಿಳಿಯದ ಸಂಗತಿಯಾಯಿತು ಅವನಿಗೆ.

ಕಾರು ತನ್ನ ಬಿಲ್ಡಿಂಗಿನ ಮುಂದೆ ಬಂದು ನಿಲ್ಲುತ್ತದೆ. ಸ್ವಲ್ಪ ಹೊತ್ತಿನ ಕೆಳಗೆ ತಾನು ಇದ್ದ ಜಾಗದಲ್ಲಿಯೇ ಈಗ ಮಿಥಿಲಾ ಗೋಡೆಗೆ ಒರಗಿ ನಿಂತಿದ್ದಾಳೆ. ಕಾರಿನ ಒಳಗಿಂದಲೇ ಅಭಿಗೆ ವಿಶಾಲ್ ಒಂದು ಸಂದೇಶ ಕಳುಹಿಸಿ ಫೋನನ್ನು ಅಲ್ಲಿಯೇ ಬಿಟ್ಟು ಇಳಿಯುತ್ತಾನೆ. ಇಳಿದು ತನಗೇ ಗೊತ್ತಿಲ್ಲದೇ ಒಮ್ಮೆ ಬಾಲ್ಕನಿಯ ಕಡೆಗೆ ನೋಡುತ್ತಾನೆ. ಮಿಥಿಲಾ ಕೂಡಾ ಅವನು ನೋಡಿದೆಡೆಗೆ ಒಮ್ಮೆ ನೋಡುತ್ತಾಳೆ. "ಇಷ್ಟು ರಾತ್ರಿ ಯಾಕೆ ಬರೋದಕ್ಕೆ ಹೋದೆ ನೀನು? ಏನು ವಿಷಯ?" ಎಂದು ಕೇಳುತ್ತಾನೆ. "ಅಭಿ ತಲೆಯಲ್ಲಿ ಏನೇನು ತುಂಬಿ ಕಳಿಸಿದಿಯ ಹೇಳು?" ಎಂದು ಘನತೆ ಮೀರದ ಸಿಟ್ಟಿನಲ್ಲಿ ಕೇಳುತ್ತಾಳೆ. ವಿಶಾಲ್ ತಬ್ಬಿಬ್ಬುಗೊಳ್ಳುತ್ತಾನೆ. "ನಿಜವಾಗಿಯೂ ನಾನೇನು ಹೇಳಿಲ್ಲ. ಪ್ರಾಮಿಸ್." ಎಂದು ಮುಂದೆ ಬರಲು ಕಾಲಿಡುತ್ತಾನೆ ಮಿಥಿಲಾ ಪಕ್ಕಕ್ಕೆ ಸರಿಯುತ್ತಾಳೆ.” ಮತ್ಯಾಕೆ ಅವನನ್ನ ಇಷ್ಟು ರಾತ್ರಿಯಲ್ಲಿ ಕರೆಸಿಕೊಂಡಿದ್ದೆ? ಬೇರೆ ಏನು ವಿಷಯ ಇರೋದಕ್ಕೆ ಸಾಧ್ಯ" ಎಂದು ಕೇಳುತ್ತಾಳೆ. "ನನಗೆ ಬೇರೇನೋ ಮಾತಾಡೋದಿತ್ತು ಅವನ ಜತೆಗೆ. ನೋಡು. ಎದುರಿನ ಆ ಬಾಲ್ಕನಿಯಲ್ಲಿ ಒಬ್ಬಳು ದಿನವೂ ನಿಲ್ಲುತ್ತಿದ್ದಳು. ಆದರೆ ನಾನು ಸಂದರ್ಶನದಲ್ಲಿಅವಳ ಬಗೆಗೆ ಹೇಳಿದಾಗಿಂದಲೂ ಅವಳು ಅಲ್ಲಿ ಕಂಡಿಲ್ಲ. ಅಸಹನೆ ಉಂಟಾಗಿ ಅಭಿಯನ್ನ ಬಾ ಅಂತ ಕರೆದಿದ್ದೆ ಅಷ್ಟೇ..." ಎಂದು ತುಂಬ ಕಳಕಳಿಯಿಂದ ವಿಶಾಲ್ ಹೇಳುತ್ತಾನೆ. ಮಿಥಿಲಾಳ ಕಣ್ಣಲ್ಲಿ ಆಗಲೇ ನೀರು ತುಂಬಿದೆ. ವಿಶಾಲ್‍ಗೆ ಏನು ನಡೆಯುತ್ತಿದೆಎಂದು ತಿಳಿಯದೇ ಅವಳ ಭುಜ ಮುಟ್ಟಲೋ ಬೇಡವೋ ಎಂದು ಕೈ ಮುಂದೆ ತಂದು ಮತ್ತೆ ಹಿಂದಕ್ಕೆ ತೆಗೆದುಕೊಳ್ಳುತ್ತಾನೆ. ಇಷ್ಟವಿಲ್ಲದಿದ್ದರೂ ತನ್ನ ಸ್ಟುಡಿಯೋದ ಪರದೆ ಎಳೆಯುವ ತನ್ನದೇ ಕೈ ನೆನಪಾಯಿತು ಅವನಿಗೆ. "ಅಭಿ ನನ್ನನ್ನ ಬಿಡ್ತೇನಂತ ಹೇಳುತ್ತಿದ್ದಾನೆ..." ಎಂದು ತನ್ನ ಮಸ್ಕಾರ ಹೋಗದ ರೀತಿಯಲ್ಲಿ ಹೊರಬಂದ ಒಂದು ಹನಿ ಕಣ್ಣೀರನ್ನು ತನ್ನ ತೋರು ಬೆರಳಲ್ಲಿ ಇಳಿಸಿಕೊಳ್ಳುತ್ತಾಳೆ. ವಿಶಾಲ್ ಅವಳು ಇಳಿಸಿದ ಹನಿಯನ್ನುನೋಡುತ್ತಾನೆ. ಬೆಳ್ಳಗಿನ ಅವಳ ಶರ್ಟ್‍ಗೆಹನಿಯನ್ನು ಒರೆಸಿದಾಗ ಇರುವೆಯ ಗಾತ್ರದ ಕರೆಯೊಂದು ಮೂಡುತ್ತದೆ. ಮಿಥಿಲಾ ಮುಂದುವರೆಸುತ್ತಾ - "ಅಷ್ಟೆಲ್ಲಾ ಘಟನೆಗಳು ನಡೆದ ಮೇಲೂ ಅವನು ನಾನು ಮದುವೆಯಾಗಿದ್ವಿ. ಈಗ್ಯಾಕೆ ಧಿಡೀರ್ ಹೀಗೆ ಹೇಳ್ತಿದಾನೆ ಅಂತ ಗೊತ್ತಾಗುತ್ತಿಲ್ಲ..." ಎಂದು ವಿವರಿಸುತ್ತಾಳೆ. ಅವಳ ವಿವರಣೆಯಲ್ಲಿ ವಿಶಾಲ್‍ಗೆ ಯಾವ ಕಲ್ಮಶವೂ ಕಾಣುವುದಿಲ್ಲ. ವಿಶಾಲ್ ಈಗ ಅವಳ ಭುಜವನ್ನುಮುಟ್ಟಿ - "ಮೇಲೆ ಬಾ. ಇಷ್ಟು ರಾತ್ರಿ ಇಲ್ಲಿ ನಿಲ್ಲೋದು ಸರಿಯಲ್ಲ" ಎಂದು ಕರೆದುಕೊಂಡು ಹೋಗ್ತಾನೆ. ಮರುಮಾತಾಡದೇ ಮಿಥಿಲಾ ಜತೆಗೆ ಹೋಗುತ್ತಾಳೆ. ಸೆಕ್ಯೂರಿಟಿ ಗಾರ್ಡ್ ಓರೆಗಣ್ಣಿಂದ ನೋಡುತ್ತಾನೆ. ಮೂರು ಜನರು ಮಾತ್ರ ಲಿಫ್ಟ್ ಒಳಗೆ ಹೋಗಬೇಕೆಂಬ ಎಚ್ಚರಿಕೆಯನ್ನುಓದುವ ಮಿಥಿಲಾ ಲಿಫ್ಟ್ ಮುಂದೆ ನಿಂತು ತಾನು ಬರುವುದಿಲ್ಲವೆಂದು ಹೇಳಿ ಅಲ್ಲಿಯೇ ನಿಲ್ಲುತ್ತಾಳೆ. ವಿಶಾಲ್ ಮತ್ತೆ ಅವಳನ್ನು ಹೊರಗೆ ಕರೆದುಕೊಂಡು ಬಂದು ಕಾರು ಹತ್ತಿಸುತ್ತಾನೆ. "ನನ್ನನ್ನ ಮನೆಗೆ ಬಿಡು." ಎಂಬ ಒಂದೇ ವಾಕ್ಯದಲ್ಲಿ ಮಿಥಿಲಾ ಏನೇನೋ ಸೂಚಿಸಿದ ಹಾಗೆ ಅನ್ನಿಸುತ್ತದೆ ವಿಶಾಲ್‍ಗೆ.

ಎದುರಿನಿಂದ ಅಭಿ ತನ್ನ ಕಾರನ್ನು ಜೋರಾಗಿ ತಂದು ವಿಶಾಲ್‍ನ ಕಾರಿನ ಮುಂದೆ ನಿಲ್ಲಿಸುತ್ತಾನೆ. ವಿಶಾಲ್ ಕಾರಿನಿಂದ ಇಳಿಯುತ್ತಾನೆ. ಅಭಿ ಸಿಟ್ಟಿನಿಂದ ಕಾರು ಇಳಿದು ಬಂದು ಅವನ ಕೆನ್ನೆಗೆ ಒಂದು ಏಟು ಕೊಡುತ್ತಾನೆ. ಮಿಥಿಲಾ ಕಾರಿಂದ ಇಳಿದು ಅಚ್ಚರಿಯಿಂದ "ಅಭೀ..." ಎಂದು ಚೀರುತ್ತಾಳೆ. "ಮಿಥಿಲಾ ಮತ್ತೆ ನೀನು ಎದುರು ಬದುರು ಮನೆಲಲ್ಲಿದ್ದಿರಿ ಅಲ್ವಾ? ವಿಶಾಲನಿಗೆ ಕೇಳಿದ ಪ್ರಶ್ನೆಗೆ ಮಿಥಿಲಾ - "ಇದ್ವಿ. ಇದ್ವಿ. ಪ್ಲೀಸ್ ಕೂಲ್ ಡೌನ್. ಮಾತಾಡು. ಜಗಳ ಬೇಡ." ಎಂದು ಕಳಕಳಿಯಿಂದ ಕೇಳ್ತಾಳೆ. "ಹಾಗಾದರೆ ಸಂದರ್ಶನದಲ್ಲಿ ನೀನು ಹೇಳಿರೋದು ಮಿಥಿಲಾ ಬಗೆಗೆ. ಹೇಳಿ ಎದುರಿನ ಆ ಬಾಲ್ಕನಿಯವಳ ಹಿಂದೆ ಬಚ್ಚಿಟ್ಕೊಂಡಿದಿಯಾ?" ಎಂದು ಸಿಟ್ಟಿನಲ್ಲಿ ಚೀರುತ್ತಾನೆ. ಮಿಥಿಲಾಗು ಇದು ಆಶ್ಚರ್ಯ ಹುಟ್ಟಿಸುತ್ತದೆ. ವಿಶಾಲ್ - "ಇಲ್ಲ ಅಭಿ. ಖಂಡಿತ ಇಲ್ಲ. ತಪ್ಪು ತಿಳೀತಿದಿಯ ನೀನು. ನಿಜವಾಗಲೂ ನಾನು ಮಿಥಿಲಾ ಬಗೆಗೆ ಹೇಳಿರೋದಲ್ಲ ಅದು. ಹಾಗಿದ್ದಿದ್ದರೆ ನಿನ್ನನ್ನ ಕರೆದು ನನ್ನ ತುಮುಲ ಯಾಕೆ ಹೇಳಿಕೊಳ್ತಿದ್ದೆ ನಾನು?" ಎಂದು ಲಾಜಿಕಲ್ ಆಗಿ ಹೇಳುತ್ತಾನೆ. “ಬೇಕಾದರೆ ಆ ದರಿದ್ರ ಸಂದರ್ಶನ ಬಂದಿರುವ ಪತ್ರಿಕೆ ಮೇಲೆ ಹೋಗಿ ತರ್ತೇನೆ. ಎಲ್ಲಾದರೂ ನಾನು ಮಿಥಿಲಾ ಬಗೆಗೆ ಅದನ್ನೆಲ್ಲ ಹೇಳುರುವುದು ಎಂದೆನಿಸಿದರೆ ನೀನು ಹೇಳಿದ ಹಾಗೆ ಕೇಳ್ತೇನೆ. ಬೇಕಾದರೆ ಸಂಗೀತ ಗಿಂಗೀತ ಎಲ್ಲ ಬಿಟ್ಟು ವಾಪಸ್ ಊರಿಗೆ ಹೋಗಿಬಿಡ್ತೇನೆ” ಎಂದು ಅಭಿಯ ಉತ್ತರಕ್ಕೂ ಕಾಯದೇ ತನ್ನ ಮನೆಯ ಕಡೆಗೆ ಓಡುತ್ತಾನೆ. ಅವನು ಲಿಫ್ಟ್ ಹತ್ತಿದ ಕೂಡಲೇ ಅಭಿ - "ಇದನ್ನು ನಿಭಾಯಿಸೋದು ಇಷ್ಟು ಕಷ್ಟ ಅಂತ ಗೊತ್ತಿರಲಿಲ್ಲ. ನನಗೆ ಗೊತ್ತು ನೀನು ಅವನು ಜತೆಗಿದ್ದಿರಿ ಅಂತ. ಆದರೂ ಮನಸು ಒಪ್ಪುತ್ತಿಲ್ಲ." ಮಿಥಿಲಾ ಅವನ ಭುಜ ತಟ್ಟಿ - "ಎಲ್ಲಾ ನಿನ್ನ ತಲೆಯಲ್ಲಿದೆ ಅಭಿ. ನಾನು ವಿಶಾಲ್ಜತೆಗಿದ್ವಿ ಅಂತ ನೀನೇ ಪಾಸ್ಟ್ಟೆನ್ಸ್‍ನಲ್ಲಿ ಹೇಳ್ತಿದಿಯ. ಮತ್ಯಾಕೆ ಗೊಂದಲ." ಎಂದು ಸಮಾಧಾನವಾಗಿ ಕೇಳುತ್ತಾಳೆ. "ದಯವಿಟ್ಟು ಕ್ಷಮಿಸು. ನನಗೆ ಮುಂದುವರೆಸೋಕೆ ಆಗ್ತಿಲ್ಲಇದನ್ನ." ಎಂದು ಅವಳ ಕಣ್ಣು ತಪ್ಪಿಸುತ್ತಾನೆ.

ಎದುರಿನ ಬಾಲ್ಕನಿಯವಳು ನಡೆದು ಬರುತ್ತಿದ್ದಾಳೆ. ಅಭಿ ಅವಳನ್ನು ನೋಡುವಷ್ಟರಲ್ಲಿ ಒಳಗೆ ಹೋಗುತ್ತಾಳೆ. ಅವಳು ಬಿಕ್ಕಳಿಸಿ ಅಳುತ್ತಿದ್ದಾಳೆ. ಕಣ್ಣುಕಪ್ಪು ಮುಖಕ್ಕೆಲ್ಲಾ ಹರಡಿದೆ. ಮೇಲಿನಿಂದ ವಿಶಾಲ್ ಅವಳು ಬರುವುದನ್ನು ನೋಡುತ್ತಾನೆ. ಧಾವಂತದಿಂದ ವ್ಹಿಸ್ಕಿಯ ಹನಿಗಳು ಬಿದ್ದಿರೋ ಪೇಪರನ್ನು ಕಂಕುಳಲ್ಲಿ ಹಿಡಿದು ಇಳಿಯುತ್ತಾನೆ. ಲಿಫ್ಟ್ ಇರುವುದನ್ನೂ ಮರೆತು ಮೆಟ್ಟಿಲಿನಿಂದ ಅರ್ಧ ಇಳಿಯುತ್ತಿದ್ದಂತೆಯೇ ದೊಡ್ಡ ಮಂಜುಗಡ್ಡೆಯೊಂದು ನೆಲಕ್ಕಪ್ಪಳಿಸಿದ ಸದ್ದು ಬರುತ್ತದೆ. ವಿಶಾಲ್ ಅರ್ಧದಿಂದಲೇ ಬಗ್ಗಿ ನೋಡುತ್ತಾನೆ. ಬಾಲ್ಕನಿಯ ಹುಡುಗಿಯ ತಲೆಯಿಂದ ರಕ್ತ ಚಿಮ್ಮುತ್ತಿದೆ. ಮಿಥಿಲಾ ಜೋರಾಗಿ ಅಳುತ್ತಾ ಚೀರುತ್ತಾಳೆ. ಅಭಿ ಗಾಬರಿಯಿಂದ ಬಾಲ್ಕನಿಯವಳ ಕಡೆಗೆ ಧಾವಿಸುತ್ತಾನೆ. ಮೇಲಿಂದ ವಿಶಾಲ್ ಬಿಟ್ಟ ಕಣ್ಣು ಬಿಟ್ಟಂತೆಯೇ ನೋಡುತ್ತಿದ್ದಾನೆ. ಮಿಥಿಲಾ ಓಡಿ ಬಂದು ಅಭಿಯ ಪಕ್ಕದಲ್ಲಿ ಅವನ ಎದೆಗೊರಗಿ ನಿಲ್ಲುತ್ತಾಳೆ. ವಿಶಾಲ್ ಕೂಡಾ ಉಸಿರೂ ತೆಗೆದುಕೊಳ್ಳದೇ ಓಡಿ ಬಂದು ಅವಳ ಬಳಿ ನಿಲ್ಲಿತ್ತಾನೆ. ಪೇಪರ್ ಕೆಳಗೆ ಬಿಳುತ್ತದೆ. ಇಡೀ ರಸ್ತೆಯಲ್ಲಿ ಸ್ಮಶಾಣಮೌನವಿದೆ. ನಡುಗುತ್ತಿರುವ ವಿಶಾಲ್ ರಕ್ತದ ಮಡುವಿನಲ್ಲಿ ಪ್ರಾಣ ಬಿಟ್ಟಿರುವ ಅವಳೆಡೆಗೆ ನೋಡಿ ಅಳು ತಡೆಯಲಾರದೇ - "ಮಿಥಿಲಾ...." ಎಂದು ಚೀರುತ್ತಾನೆ. ಖಾಲಿ ರಸ್ತೆಯಲ್ಲಿ ಮಿಥಿಲಾ ಎಂಬುದು ಮತ್ತೊಮ್ಮೆ ಕೇಳುತ್ತದೆ. ಮಿಥಿಲಾ ಮೂಕಳಾಗಿದ್ದಾಳೆ. ಅಭಿ ಒರಗಿರುವ ಮಿಥಿಲಾಳನ್ನು ಪಕ್ಕಕ್ಕೆ ಸರಿಸಿ ಎರಡು ಹೆಜ್ಜೆ ಹಿಂದೆಸರಿಯುತ್ತಾನೆ. ಮಿಥಿಲಾ ಮಂಡಿಯೂರಿ ವಿಶಾಲನ ಪಕ್ಕ ಕೂರುತ್ತಾಳೆ. ರಸ್ತೆಯಲ್ಲಿ ನೀರವ ಮೌನವಿದೆ.

***

Vivek is a student of cinema and has been working in the entertainment sector for the last 12 years which includes stints in radio, advertising and movies. He has studied Literature and Mass Communication. He is an ardent admirer of Mani Ratnam and Vishal Bhardwaj. Given his career as a film writer, he has stayed in Chennai, Mumbai and is currently residing in Bengaluru.

Support our literary endeavours by subscribing to the FREE Newsletter service of Bengaluru Review here. Reach out to us with any queries or ideas of your own at reviewbengaluru@gmail.com.

Like
Comment
Loading comments