ನಾಲ್ಕು ಕವನಗಳು - ರಾಮ್ ಕುಮಾರ್ ಡಿ.ಟಿ.

Forgot password?

Delete Comment

Are you sure you want to delete this comment?

ನಾಲ್ಕು ಕವನಗಳು - ರಾಮ್ ಕುಮಾರ್ ಡಿ.ಟಿ.

ನಾಲ್ಕು ಕವನಗಳು - ರಾಮ್ ಕುಮಾರ್ ಡಿ.ಟಿ.

'ನನ್ನದುʼ ಎಂಬುದು ಒಂದು ಸಲ, ಹೊಕ್ಕಿತು ನಿನ್ನ ಎಂದರೆ…

ಅದಕ್ಕೆ ಹಿಡಿತ

ವೆಂಬುದನ್ನು ಇಡೀ ಬ್ರಹ್ಮಾಂಡವೆ

ನಲಿದು ಉಲಿದರೂ ಸಿಗದು.

ನೀ ಆವ

ನರ ಮನುಜನೊ

ನಿನ್ನದೆನ್ನುವುದ ತಿಳಿಯದ

ಮದ ಮತ್ತಕ್ಕೇರಿರುವುದೇನು ಹೊಸತಲ್ಲ

ನೀನೆ ನಿನ್ನವನಲ್ಲ! ಹೋಗು…

ಮತ್ತೇಕೆ ಬಯಸಿ ಬೆಂಡಾಗಿ

ಬಿಕ್ಕಿ ಬಿಕ್ಕಿ ಅಳುವೆ.

ನಿನ್ನದೇ ದಾರಿಯ ಹುಡುಕು

ಗುರಿ ಇದಿಲ್ಲದಿದ್ದರೇನು, ಮತ್ತೊಂದು…

ಗುರಿ ಮುಟ್ಟುವ ತವಕ

ನಾಲ್ಕು ಹೆಜ್ಜೆಯಿಡಲು ಸಹಾಯವಾದರೂ

ಗಮನಿಸು, ಅದು

ದಾರಿಯ ಕಲಿಕೆಯ

ವ್ಯರ್ಥ ಅವ್ಯರ್ಥದ

ಗೊಂದಲದಲಿ ಸಿಲುಕದಿರಲಿ.

ಎಲ್ಲವೂ ಕಲಿಕೆ

ಅಂದವನು ತಿಳಿದವನು.

ವ್ಯರ್ಥ, ಅವ್ಯರ್ಥ ಒಂದೆಯೇ?

ತಿಳಿದವನು, ತಿಳಿದಿರುವನು. ಅಷ್ಟೆ!

ಅನುಭವಿಸು ಕಲಿಕೆಯ

ನಿನ್ನದೆನ್ನುವುದು ಅದೊಂದೆ.

ಮತ್ತಾವುದು ನಿನದಲ್ಲ

ಆ ಗೊಂದಲವೇ ಬೇಡ

ಆ ಗುರಿ ಮುಟ್ಟಿದ, ಗುರಿಯೂ

ನಿನದಲ್ಲ, ನೀನು ಹುಟ್ಟು ಹಾಕಿದ

ಕಥೆಗೆ ಪಾರ್ಥ ʼನೀʼ …. ನಿನ್ನದೂ ಅಲ್ಲ….

***

ಕಾವಿ

ಮುಪ್ಪಿರದ ಕಾವಿಗೆಲ್ಲಿ

ಜಾಗವಿಲ್ಲಿ

ಬಡತನವೇ ಬಂಡವಾಳ

ಸಿರಿವಂತಿಕೆ ಅನ್ನುವ ಹಾಹಾಕಾರ

ಎರಡೂ ದಡದಲಿ ಬರಿ ಅವರೆ

ಕಾವಿ ಎಂಬುದು ಬರಿ ಒಂದು ಉಡುಪೇ? ವೇಷವೇ?

ಜೀವಕ್ಕೆ ತನ್ನ ದಾರಿ

ಹುಡುಕುವ ಪಾಠ ಬೇಕೆ?

ಅದೇನು ಬಯಸಿತ್ತೊ ಏನೊ

ಅದ್ಯಾವ ಅಂಗಳದಲಿ ಮಿಂದಿತ್ತೊ!

ಕಾವಿ ಒಂದು ವೈರಾಗ್ಯವಲ್ಲ

ಅದೊಂದು ಮನಸ್ಥಿತಿಯ ಆಯ್ಕೆ

ಹಾಕಲೇ ಬೇಕೆಂದೇನಿಲ್ಲ.

***

ಕಲ್ಪವೃಕ್ಷ

ಈ ತಂಗಾಳಿ ಬಳಸಿ

ತೆಂಗಿನ ಗರಿಗಳೇನು

ಹೇಳ ಬಯಸಿವೆಯೊ

ನೀನಲ್ಲ ಒಡೆಯ

ಈ ಪ್ರಕೃತಿಯ

ಮಡಿಲ ಧೂಳಿನೊಂದಂಶ ನೀ

ನೀನಲ್ಲ ಸುಖಿ

ನಿನ್ನಾಸೆಗೆ ಕೊನೆಯೆಲ್ಲಿ

ನನ ಒಂದೊಂದು ಅಂಶಗಳ

ಸುಳಿ ಸುಲಿದು ತಿಂದು ನೇಗಿದರು

ನಿನ್ನಾಸೆಗೆ ಕೊನೆಯೆಲ್ಲಿ

ಕಲ್ಪವೃಕ್ಷವೆಂದೆ ನನ್ನ

ಇರಬಹುದು, ನನ್ನಿಚ್ಛೆ ಕೇಳಿದೆಯ?

ಮನ ಬಂದಂತೆ ಬಳಸಿದೆ

ಕಾಯಿ ಗರಿಗಳಿರಬಹುದು

ನನ್ನ ಮಾಂಸ ಖಂಡಗಳಿರಬಹುದು

ಕೊಡಲಿಯ ಹಿಡಿ ಕೂಡ

ನನ್ನ ಒಂದಂಶದಿಂದೆಲನೆಯೆ?

ಹಿಡಿ ನನ್ನ ಜಾತಿಯದು

ಬುಡ ಉರುಳಿಸಲು

ನಾ ಮುಂದಾದೆ

ಎಂದು ಪರಿಕಲ್ಪಿಸಿದೆಯಾ

ಯಾರಿಲ್ಲಿ ಮೂರ್ಖ

ನನ್ನಿಚ್ಛೆ ಕೇಳಿದೆಯ?

***

ಕಪ್ಪು

ಕೋಗಿಲೆಯೆ ನಿನ್ನ

ಕಪ್ಪು ತೋರ ಬಾರದೆ ಇಂದು

ನಿನ್ನ ಮತ್ತು ಕಾಗೆಯ ಕಪ್ಪಿನ

ವ್ಯತ್ಯಾಸ ಬರಿ ಹೆಸರಿಗೆ, ಅಲ್ಲವೆ

ಕಪ್ಪು ಅತಿ ಸುಂದರವಲ್ಲವೆ.

ಕಾಗೆಯ ಕಪ್ಪಿಗೆ

ಮಸಿ ಬಳೆದವರಾರು?

ನಿರ್ಧರಿಸುವ ಮಾಧ್ಯಮ

ಎಂದಿಗೂ ‘ಗುಣ’ ವಲ್ಲವೆ

ಕಪ್ಪು ಅತಿ ಸುಂದರವಲ್ಲವೆ.

ಕಪ್ಪಿಗೆ ಮಸಿ ಬಳೆದವರಾರು!

ಸಾಧ್ಯವೆ ಮಸಿ ಬಳಿಯಲು ಕಪ್ಪಿಗೆ?

ಗರ್ಭದ ಕಪ್ಪು

ಎಲ್ಲ ಬಣ್ಣಗಳ ಮೂಲವಲ್ಲವೆ

ಅದೊಂದೇ ಸತ್ಯವಲ್ಲವೆ

ಕಪ್ಪು ಅತಿ ಸುಂದರವಲ್ಲವೆ.

***

ರಾಮ್ ಕುಮಾರ್ ಡಿ.ಟಿ. ಮೂಲತಹ ಗಣೇಶಗುಡಿ, ಉತ್ತರ ಕನ್ನಡದವರು. ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ವೃತ್ತಿಯಲ್ಲಿ ಉದ್ಯಮಿಯಾದರೂ, ಇವರ ಹವ್ಯಾಸಗಳು: ಓದುವುದು, ಬರೆಯುವುದು, ಸೈಕ್ಲಿಂಗ್.

Support our literary endeavours by subscribing to the FREE Newsletter service of Bengaluru Review here. Reach out to us with any queries or ideas of your own at reviewbengaluru@gmail.com.

Like
Comment
Loading comments