ಸೌತೆಂಡ್ ಸರ್ಕಲ್
ತಲಿ ಮುಗದ ಮ್ಯಾಲೆ ಮುಗುಲ ಸುರು ಆಗತದ
ಏನ ಮುಗುಲ ಅನ್ನೂದು ಬರೆ ಕಾಲ್ಪನಿಕೋ?
ಅಂಬರ ಚುಂಬನ ಮಾಡುವ ಕೆಲಸಾ
ಮಾರ್ಗದ್ದೋ ಏನ ಮಾನ್ಸಿಕೋ?
ಉದ್ದಿದ್ದನ ಅಂತ ಯದ್ದನಿಂತ ಘಡ್ಯಾರ
ಮೂರ ಇದ್ರೂ ವಂಟಿಗಾಲಿನ ಮ್ಯಾಲೆ
“ಆಕಾಶ ಬುಟ್ಟಿ ಇಟ್ಟನ ಕಟ್ಟಿ” ಅಂತದ
ಘಳಗೀಗೊಮ್ಮೆ ಘಂಟಿ ಹೊಡದಮ್ಯಾಲೆ
ವಂದ ದಿವಸ ಹರದ ಹಂಚತದ
ಬಾರಸ್ತದ ತಾಸತಾಸಿಗೆ
ಷಂಖದ ನಾದ ಅಸಂಖ್ಯಾತರ ಮುಂದ
ಗದ್ದಲಕ್ಕ ಬಿದ್ದ ತ್ರಾಸಿಗೆ
ಊಟದಹೊತ್ತಿನ ನೆನಪ ತಗೀತದ
ಹಸದ ಹಲ್ಲ ಕಿಸದ ಹುಡುಗರಿಗೆ
ದಿಕ್ಕದಿಕ್ಕಿಗೆ ವದರಿ ಹೇಳತದ
ದಿಕ್ಕಿಲ್ಲದೆ ಕೈ ತಟ್ಟವರಿಗೆ
ಊರುಸಾಬರಿ ಮಾಡತಾವ ಹುಡುಕಿ
ವಮ್ಮೆ ಯಡ ವಮ್ಮೆ ಬಲ ಪಕ್ಷ
ಕ್ವಾಟಿ ಕಟ್ಟಲಿಕ್ಕೆ ಕೋಟಿ ಕೊಟ್ಟಾವು
ಲಕ್ಷಕ್ಕೇನ ಕೊಡತಾವ ಲಕ್ಷ?
“ಛೊಲೊ ದಿವಸ ಬರತಾವ” ಅಂತ
ಆಳಾವ್ರ ಅಳಿದ ಬಾಳ ವರ್ಷಾದ್ರೂ
ಅವರ ಬಾಯಿಲೇ ಅನಿಶಿ ಈ ಮಾತ
ಬಿಟ್ಟಿಲ್ಲ ಅವರ Ben ಹತ್ತೂದು
***
ಇಂದಿನ ಮುಂದ
ಮನ್ಯಾಗ ತಿಂದಮುಗಿಸಿ ಕಟ್ಟಿಟ್ಟ ಬುತ್ತಿ
ಹೊಳ್ಯಲ್ಲೇ ಬಂದೆ ನಾ ಊರೆಲ್ಲಾ ಸುತ್ತಿ
ಹಿಂದಿಟ್ಟ ಹೆಜ್ಜಿಯ ಗುರುತೆಲ್ಲಾ ಅಳಿಸಿ
ಮುಂದಿನ ಹಾದಿಯ ಅಗಿಯನ್ನ ಬಿತ್ತಿ
ರೆಕ್ಕಿ ಬಾಡಿದ್ದು, ಸೋತು ಕಾಡಿದ್ದು
ಕರಿಗೂದಲ ರಾಶ್ಯಾಗ ಬೆಳ್ಳಿ ಮೂಡಿದ್ದು
ದಣಿಕೀಯ ತಣಿಕೀಗೆ ಸೌಡೂ ಸಿಗಧಂಗ
ಯಲಿ ಉದುರಿ ಗಿಡಗಳು ನಕ್ಕಿ ಮಾಡಿದ್ದು
ಯಳಿಗಣ್ಣಿಲೆ ಕಂಡಿದ್ದ ಹುಚ್ಚಿನ ಆಶಾ-ಕ
ಮರುರೂಪ ಕೊಟ್ಟಿತ್ತು ವಯಸಿನ ಭಾಷಾ
ನಡಿನಡಿದು ಬಲಿತಿದ್ದ ಕಾಲಿನ ಎಲುಬಿಗೆ
ಊರಿಸಿ ಕೊಟ್ಟಿತ್ತು ಖಂಬದ ವೇಷಾ
ಅವರಿವರ ಅರಿವಿನ ಸುದ್ದಿ ಮರಿತೀನಿನ್ನ
ಕೂಡ್ಯಾಡು ಆಟದ ನಿಯಮ ಮುರಿತೀನಿನ್ನ
ಊರಿಗೆ ಬಂದರೂ ನೀರಿಗೆ ಹೋಗದೇ
ಒಗ್ಗಾಲಿನ ನಡಗೀಲೆ ಹಗಲು ತೆರಿತೀನಿನ್ನ.
***

Maithreyi Karnoor is a translator and writer based in Hubli. Her novel Sylvia: Distant Avuncular Ends is forthcoming.
Support our literary endeavours by subscribing to the FREE Newsletter service of Bengaluru Review here. Reach out to us with any queries or ideas of your own at reviewbengaluru@gmail.com.